ಶೇರುಪೇಟೆ ಪಾತಾಳಕ್ಕೆ: ಒಂದೇ ದಿನದಲ್ಲಿ ಹೂಡಿಕೆದಾರರಿಗೆ 11.42 ಲಕ್ಷ ಕೋಟಿ ರೂ. ನಷ್ಟ
ಮುಂಬೈ,ಮಾ.12: ಮುಂಬೈ ಶೇರು ಮಾರುಕಟ್ಟೆ ಗುರುವಾರವೂ ಪಾತಾಳಕ್ಕಿಳಿದಿದ್ದು, ಒಂದೇ ದಿನದಲ್ಲಿ ಹೂಡಿಕೆದಾರರು 11.42 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ. ಕೊರೋನ ವೈರಸ್ ಹಾವಳಿಯ ಜೊತೆಗೆ ಯೆಸ್‌ಬ್ಯಾಂಕ್ ನ ಪತನ ಕೂಡಾ ಶೇರು ಮಾರುಕಟ್ಟೆ ನೆಲಕಚ್ಚುವಂತೆ ಮಾಡಿದೆ.
‘ಮುಂಬೈ ಶೇರುಪೇಟೆಯಲ್ಲಿ ಸಂವೇದಿ ಸೂಚ್ಯಂಕ 3.204 ಅಂಶಗಳಷ್ಟು ಕುಸಿದಿದ್ದು, 32,493ಕ್ಕೆ ತಲುಪಿದೆ. ಕಳೆದ 23 ತಿಂಗಳುಗಳಲ್ಲೇ ಮುಂಬೈ ಶೇರುಪೇಟೆ ಕಂಡ ಅತ್ಯಂತ ಗರಿಷ್ಠ ಕುಸಿತ ಇದಾಗಿದೆ. ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ವಾರಗಳಿಂದ ಹೂಡಿಕೆದಾರರಲ್ಲಿ ದಿಗಿಲು ಹೆಚ್ಚುತ್ತಿರುವುದು ಶೇರು ಮಾರುಕಟ್ಟೆ ಪತನಕ್ಕೆ ಪ್ರಮುಖ ಕಾರಣವಾಗಿದೆ.
ಇತ್ತ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿಯಲ್ಲಿ ಸಂವೇದಿ ಸೂಚ್ಯಂಕವು 950 ಅಂಶಗಳಷ್ಟು ಕುಸಿದಿದ್ದು, 9508 ಅಂಕಗಳಿಗೆ ತಲುಪಿದೆ. 2007ರ ಜೂನ್ ಬಳಿಕ ನಿಫ್ಟಿ ಕಂಡ ಅತ್ಯಧಿಕ ಪ್ರಮಾಣದ ಸೆನ್ಸೆಕ್ಸ್ ಕುಸಿತ ಇದಾಗಿದೆ.
ರಾಷ್ಟ್ರೀಯ ಶೇರುಮಾರುಕಟ್ಟೆಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳ ಶೇರು ಮೌಲ್ಯದಲ್ಲಿ ಶೇ.13ರಷ್ಟು ಇಳಿಕೆಯಾಗಿದೆ. ನಿಫ್ಟಿ ಬ್ಯಾಂಕ್, ಖಾಸಗಿ ಬ್ಯಾಂಕ್, ರಿಯಲ್ ಎಸ್ಟೇಟ್, ಫಾರ್ಮಾಸ್ಯೂಟಿಕಲ್ಸ್, ಲೋಹ, ಮಾಧ್ಯಮ, ಐಟಿ, ಹಣ ಕಾಸು ಸೇವೆಗಳು ಹಾಗೂ ಆಟೋ ವಲಯದ ಶೇರುಗಳಲ್ಲಿ ತಲಾ ಶೇ.8ರಿಂದ 10ರಷ್ಟು ಕುಸಿತವಾಗಿದೆ.
ಯುಪಿಎಲ್, ವೇದಾಂತ, ಹಿಂಡಾಲ್ಕೊ, ಓಎನ್‌ಜಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೈಲ್ ಇಂಡಿಯಾ, ಆ್ಯಕ್ಸಿಸ್ ಬ್ಯಾಂಕ್, ಐಟಿಸಿ, ಬಜಾಜ್ ಪೈನಾನ್ಶಿಯಲ್ ಸರ್ವಿಸ್, ಟಾಟಾ ಮೋಟಾರ್ಸ್, ಗ್ರಾಸಿಮ್ ಇಂಡಸ್ಟ್ರೀಸ್, ಅಡಾನಿ ಪೋರ್ಟ್ಸ್ ಹಾಗೂ ಇಂಡಿಯನ್ ಆಯಿಲ್ ಕಂಪೆನಿ ಭಾರೀ ನಷ್ಟ ಅನುಭವಿಸಿದವು. ಈ ಕಂಪೆನಿಗಳ ಶೇರುಗಳು ತಲಾ ಶೇ.10-12.95ರಷ್ಟು ಕುಸಿತ ಕಂಡಿವೆ.