ಕೊರೋನಾ ಸಾಮುದಾಯಿಕವಾಗಿ ಹರಡಿಲ್ಲ: ಭಾರತ

Update: 2020-03-12 17:16 GMT

ಹೊಸದಿಲ್ಲಿ,ಮಾ.12: ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವಂತೆಯೇ, ಈ ರೋಗದ ಬಗ್ಗೆ ಗಾಬರಿಗೊಳ್ಳಬಾರದೆಂದು ಕೇಂದ್ರ ಸರಕಾವು ಜನತೆಗೆ ಧೈರ್ಯ ಹೇಳಿದೆ. ಈತನಕ ಕೊರೋನ ವೈರಸ್ ಸಾಮುದಾಯಿಕವಾಗಿ ಹರಡಿಲ್ಲವೆಂದು ಅದು ತಿಳಿಸಿದೆ.

ಅದೃಷ್ಟವಶಾತ್ ಭಾರತದಲ್ಲಿ ಸಾಮುದಾಯಿಕವಾಗಿ ಕೊರೋನ ಸೋಂಕು ಹರಡಿಲ್ಲ. ನಮ್ಮಲ್ಲಿ ದೇಶದ ಹೊರಗಿನಿಂದ ಆಗಮಿಸಿದವರಿಗೆ ಮತ್ತವರ ನಿಕಟ ಕುಟುಂಬ ಸದಸ್ಯರಿಗೆ ಸೋಂಕು ತಗಲಿದ ಪ್ರಕರಣಗಳೇ ಹೆಚ್ಚಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ. ಕೊರೋನ ವೈರಸ್ ಸಾಮುದಾಯಿಕವಾಗಿ ಹರಡುತ್ತಿರುವುದು ತನ್ನ ಗಮನಕ್ಕೆ ಬಂದಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಕೆಲವು ದಿನಗಳ ಹಿಂದೆ ತಿಳಿಸಿತ್ತು. ಈಗ ಅದನ್ನು ಅಲ್ಲಗಳೆದಿರು ಲವಕುಮಾರ್ ಅವರು ಈ ಸ್ಪಷ್ಟೀಕರಣವನ್ನು ನೀಡಿದ್ದಾರೆ.

 ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಕೊರೋನ ಸೋಂಕು ಪೀಡಿತ ದೇಶಗಳಲ್ಲಿರುವ ರಾಷ್ಟ್ರಗಳಿಂದ ತನ್ನ ನಾಗರಿಕರ ಸುರಕ್ಷತೆ ಹಾಗೂ ಕಲ್ಯಾಣವು ಭಾರತದ ಅತಿ ದೊಡ್ಡ ಆದ್ಯತೆಯಾಗಿದೆಯೆಂದರು. ಶುಕ್ರವಾರದಿಂದ ಸೋಂಕು ಪೀಡಿತ ಇರಾನ್‌ ನಲ್ಲಿರುವ ಭಾರತೀಯರನ್ನು ಒಂದರ ಬೆನ್ನ ಹಿಂದೆ ಒಂದರಂತೆ ಮೂರು ಬಾರಿ ತೆರವು ಕಾರ್ಯಾಚರಣೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಬುಧವಾರ ಕೊರೋನ ಸೋಂಕು ಪೀಡಿತರ ಸಂಖ್ಯೆ74ಕ್ಕೇರಿದ್ದು, ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ 1500 ಮಂದಿಯನ್ನು ತೀವ್ರವಾದ ನಿಗಾದಲ್ಲಿರಿಸಲಾಗಿದೆ ಹಾಗೂದೇಶಾದ್ಯಂತ 30,500ಕ್ಕೂ ಅಧಿಕ ಮಂದಿಯನ್ನು ಸಾಮುದಾಯಿಕ ಕಣ್ಗಾವಲಿನಲ್ಲಿರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.

 ಭಾರತವು ಪ್ರಸಕ್ತ 1 ಲಕ್ಷ ಪರೀಕ್ಷಾರ್ಥ ಕಿಟ್‌ಗಳನ್ನು ಹೊಂದಿದೆ. ಇನ್ನೂ ಹೆಚ್ಚಿನ ಪರೀಕ್ಷಾ ಕಿಟ್‌ಗಳ ಅಗತ್ಯವಿದ್ದು ಅವುಗಳಿಗಾಗಿ ಆರ್ಡರ್ ಸಲ್ಲಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News