ದಿಲ್ಲಿ ಹಿಂಸಾಚಾರ: ನಾಲ್ವರನ್ನು ಥಳಿಸಿ ಕೊಂದು ಚರಂಡಿಗೆಸೆದ ದುಷ್ಕರ್ಮಿಗಳ ಬಂಧನ

Update: 2020-03-12 17:24 GMT

ಹೊಸದಿಲ್ಲಿ,ಮಾ.12:ಕಳೆದ ತಿಂಗಳು ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾದ ಈಶಾನ್ಯ ದಿಲ್ಲಿಯ ಗೋಕುಲಪುರಿ ಪ್ರದೇಶದಲ್ಲಿ ನಾಲ್ವರನ್ನು ಹತ್ಯೆಗೈದು, ಅವರ ಶವಗಳನ್ನು ಚರಂಡಿಗಳಿಗೆಸೆದ ಆರೋಪದಲ್ಲಿ ನಾಲ್ಕು ಮಂದಿಯನ್ನು ಬಂಧಿಸಲಾಗಿದೆಯೆಂದು ದಿಲ್ಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಆರೋಪಿಗಳನ್ನು ಪಂಕಜ್ ಶರ್ಮಾ, ಲೋಕೇಶ್, ಸುಮಿತ್ ಹಾಗೂ ಅಂಕಿತ್ ಎಂಬುದಾಗಿ ಗುರುತಿಸಲಾಗಿದೆಯೆಂದು ಅವರು ಹೇಳಿದ್ದಾರೆ. ಹತ್ಯೆಯಾದವರ ಮೃತದೇಹಗಳನ್ನು ದಿಲ್ಲಿ ಪೊಲೀಸರು ಫೆಬ್ರವರಿ 27ರಂದು ಭಗೀರಥಿ ವಿಹಾರ್ ಹಾಗೂ ಜೋಹ್ರಿಪುರಿ ಪ್ರದೇಶಗಳಲ್ಲಿನ ಚರಂಡಿಗಳಿಂದ ಹೊರತೆಗೆಯಲಾಗಿತ್ತು.

 ಫೆಬ್ರವರಿ 23ರಂದು ಈಶಾನ್ಯ ದಿಲ್ಲಿ ಪ್ರದೇಶದಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಗಿದ್ದಾಗ ಸಹೋದರರಾದ ಆಮಿರ್ ಅಲಿ (31) ಹಾಗೂ ಹಾಶಿಂ ಸುರಕ್ಷತೆಗಾಗಿ ತಮ್ಮ ತಾಯಿಯ ಮನೆಗೆ ಹೋಗಿದ್ದರು. ಎರಡು ದಿನಗಳ ಬಳಿಕ ಅವರ ತಂದೆ ಟೈಲರ್ ವೃತ್ತಿಯ ಬಾಬು ಖಾನ್ ಪರಿಸ್ಥಿತಿ ಸಹಜಯೆಡೆೆಗೆ ಮರಳುತ್ತಿರುವುದರಿಂದ ಮನೆಗೆ ವಾಪಾಸಾಗುವಂತೆ ಮಕ್ಕಳಿಗೆ ಸೂಚಿಸಿದ್ದರು.

   ಅಮೀರ್ ಹಾಗೂ ಹಾಶಿಂ ರಾತ್ರಿ 9:30ರ ವೇಳೆಗೆ ಗೋಕುಲಪುರಿ ಪ್ರದೇಶಕ್ಕೆ ಮೋಟಾರ್ ಸೈಕಲ್‌ ನಲ್ಲಿ ಆಗಮಿಸಿದ್ದು, ಅವರು ತಮ್ಮ ಸಹೋದರ ಶೇರುದ್ದೀನ್‌ಗೆ ಫೋನ್ ಮಾಡಿ,ತಮಗೆ ಭಯವಾಗುತ್ತಿರುವುದರಿಂದ ಓಣಿಯಿಂದ ಹೊರಗೆ ಬರುವಂತೆ ತಿಳಿಸಿದ್ದರು. ಆದರೆ ಅಲ್ಲಿದ್ದ ದುಷ್ಕರ್ಮಿಗಳು ಈ ಮೂವರ ಮೇಲೆ ದಾಳಿ ನಡೆಸಿ, ಅವರನ್ನು ಹತ್ಯೆಗೈದು ಮೃತದೇಹಗಳನ್ನು ಜೋಹ್ರಿಪುರ್‌ನ ಚರಂಡಿಗೆ ಎಸೆದಿದ್ದರು ಪೊಲೀಸರು ತಿಳಿಸಿದ್ದಾರೆ.

  ಇನ್ನೊಂದು ಪ್ರಕರಣದಲ್ಲಿ ಫೆಬ್ರವರಿ 25ರಂದು ಗಲಭೆಕೋರರು ಮುಶರ್ರಫ್‌ ಎಂಬಾತನನ್ನು ಆತನ ಪತ್ನಿ, ಮಕ್ಕಳ ಮುಂದೆಯೇ ಎಳೆದೊಯ್ದು ಥಳಿಸಿ ಕೊಂದಿದ್ದರು ಹಾಗೂ ಆನಂತರ ಆತನ ಶವವನ್ನು ಭಾಗೀರಥಿ ವಿಹಾರ್‌ನಲ್ಲಿರುವ ಚರಂಡಿಗೆ ಎಸೆದಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News