ಬಿಜೆಪಿ ಸೇರಿದ ಬೆನ್ನಲ್ಲೇ ಸಿಂಧಿಯಾ ವಿರುದ್ಧದ ಭೂಕಬಳಿಕೆ ಪ್ರಕರಣದ ಮರುತನಿಖೆಗೆ ನಿರ್ಧಾರ

Update: 2020-03-13 12:14 GMT

ಭೋಪಾಲ್ :  ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ 2014ರಲ್ಲಿ  ದಾಖಲಾಗಿದ್ದ ಭೂಕಬಳಿಕೆ ಪ್ರಕರಣವನ್ನು 2018ರಲ್ಲಿ ಆರ್ಥಿಕ ಅಪರಾಧಿಗಳ ವಿಭಾಗವು  ಸಾಕ್ಷ್ಯಾಧಾರಗಳ ಕೊರತೆಯಿಂದ ಕೈಬಿಟ್ಟಿದ್ದರೆ, ಆ ಪ್ರಕರಣದ ದೂರುದಾರ ತನ್ನ ಬಳಿ ಪ್ರಕರಣದ ಹೊಸ ಸಾಕ್ಷ್ಯಗಳಿವೆ ಎಂದು  ಗುರುವಾರ ಹೇಳಿದ್ದರಿಂದ  ಈ ಪ್ರಕರಣಕ್ಕೀಗ ಮರುಜೀವ ದೊರಕಿದೆ.

ಗುರುವಾರ ಮಧ್ಯಪ್ರದೇಶದ ಆರ್ಥಿಕ ಅಪರಾಧಗಳ ವಿಭಾಗವು ಸುರೇಂದ್ರ ಶ್ರೀವಾಸ್ತವ ಎಂಬವರು ದಾಖಲಿಸಿದ್ದ ದೂರಿನ ವಿವರಗಳನ್ನು ಪರಾಮರ್ಶಿಸಲು ನಿರ್ಧರಿಸಿದೆ. ಜಮೀನು ಮಾರಾಟದ ವೇಳೆ ಸುಳ್ಳು ದಾಖಲೆಗಳನ್ನು ಪ್ರಸ್ತುತ ಪಡಿಸಿದ ಆರೋಪ ಸಿಂಧಿಯಾ ಕುಟುಂಬದ ಮೇಲಿದೆ.

ಸಿಂಧಿಯಾ ಮತ್ತವರ ಕುಟುಂಬವು ತನಗೆ ಮಹಾಲ್‍ಗಾವ್ ಎಂಬಲ್ಲಿ ಜಮೀನು ಮಾರಾಟ ಮಾಡಿದಾಗ ದಾಖಲೆಗಳನ್ನು ಫೋರ್ಜರಿಗೊಳಿಸಿತ್ತು. ಈ ಜಮೀನಿನ  2009ರ ಮೂಲ ದಾಖಲೆಯಲ್ಲಿದ್ದುದಕ್ಕಿಂತ 6,000 ಚದರ ಅಡಿ ಜಾಗ ಕಡಿಮೆಯಿತ್ತು ಎಂದು ಶ್ರೀವಾಸ್ತವ ಗುರುವಾರ ಆರೋಪಿಸಿದ್ದಾರೆಂದು ಆರ್ಥಿಕ ಅಪರಾಧಗಳ ಘಟಕ ಹೇಳಿದೆ.

ಪ್ರಕರಣದ ಮರು ತನಿಖೆಯು ರಾಜಕೀಯ ದ್ವೇಷದ ಕ್ರಮ ಎಂದು ಸಿಂಧಿಯಾ ಅವರ ಸಮೀಪವರ್ತಿ ಪಂಕಜ್ ಚತುರ್ವೇದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News