ಝೀ ನ್ಯೂಸ್ ನ ಸುಧೀರ್ ಚೌಧರಿಗೆ 'ಮೊಟ್ಟೆ, ಪೆಟ್ರೋಲ್ ಜಿಹಾದ್' ಪರಿಚಯಿಸಿ ಕಾಲೆಳೆದ ಟ್ವಿಟರಿಗರು!

Update: 2020-03-13 17:07 GMT

ಹೊಸದಿಲ್ಲಿ: ಬುಧವಾರ ಸಂಜೆ ಝೀ ನ್ಯೂಸ್ ಚಾನೆಲ್ ನಲ್ಲಿ ತಮ್ಮ ಪ್ರೈಮ್ ಟೈಮ್ ಶೋದಲ್ಲಿ ಸುಧೀರ್ ಚೌಧರಿ 'ಜಮೀನ್ ಜಿಹಾದ್' ಎಂಬ ಹೆಸರಿನ ಕಾರ್ಯಕ್ರಮ ನಡೆಸಿರುವುದು ಇದೀಗ ನಗೆಪಾಟಲಿಗೀಡಾಗಿದೆ. ಇದಕ್ಕಾಗಿ ಅವರು ಬಳಸಿದ ಫ್ಲೋ ಚಾರ್ಟ್ ಒಂದಂತೂ ಫೇಸ್ ಬುಕ್ ಪೇಜ್ ಆದ Boycott Hallal In Indiaದ ಐದು ವರ್ಷ ಹಳೆಯ ಫೇಸ್ ಬುಕ್ ಪೋಸ್ಟ್ ನಿಂದ ನಕಲು ಮಾಡಲಾಗಿತ್ತು. ಆದರೆ ಟಿಆರ್‍ ಪಿ ಮೇಲೆಯೇ ಕಣ್ಣಿಟ್ಟವರಿಗೆ ಇದು ದೊಡ್ಡ ವಿಚಾರವೇನಲ್ಲ ಬಿಡಿ.

ತಮ್ಮ ಕಾರ್ಯಕ್ರಮದಲ್ಲಿ 13 ವಿಧದ `ಸೌಮ್ಯ' ಮತ್ತು `ಉಗ್ರ' ಜಿಹಾದ್ ಕುರಿತು ಮಾತನಾಡಿ, ಮುಸ್ಲಿಂ ಸಮುದಾಯವನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸಲು ಯತ್ನಿಸಿದ ಚೌಧರಿಗೆ ಟ್ವಿಟರಿಗರು `ಹುಸ್ನ್ ಜಿಹಾದ್'ನಿಂದ ಹಿಡಿದು `ಚಾಯ್ ಜಿಹಾದ್' ಹಾಗೂ `ಎಗ್‍ ಜಿಹಾದ್' ಆಫರ್ ಮಾಡಿ ಕಾಲೆಳೆದರು.

ಟ್ವಿಟ್ಟರಿಗರು ಸುಧೀರ್ ಚೌಧರಿಯವರಿಗೆ ವಿವಿಧ ಇತರ ಜಿಹಾದ್‍ ಗಳ ಪರಿಚಯ ಮಾಡಿಕೊಟ್ಟರು. ಅವರನ್ನು ಟ್ಯಾಗ್ ಮಾಡಿ #ಹುಸ್ನ್‍ ಜಿಹಾದ್ ಟ್ರೆಂಡಿಂಗ್ ಆಯಿತು. ಮತ್ತೆ ಸ್ವಲ್ಪ ಹೊತ್ತಿನಲ್ಲಿ #ಪೆಟ್ರೋಲ್‍ ಜಿಹಾದ್ ಸುದ್ದಿಯಾದರೆ ನಂತರ ಎಗ್‍ ಜಿಹಾದ್, ದುಬೈಜಿಹಾದ್, ಚಾಯ್‍ ಜಿಹಾದ್ ಹಾಗೂ ಫುಡ್‍ ಜಿಹಾದ್ ಹ್ಯಾಶ್ ಟ್ಯಾಗ್ ಗಳ ಮೂಲಕ ಟ್ವಿಟರಿಗರು ಸುಧೀರ್ ಚೌಧರಿಗೆ ತಿರುಗೇಟು ನೀಡಿದರು.

ಎರಡು ಸಮುದಾಯಗಳ ನಡುವೆ ವೈಷಮ್ಯ ಉಂಟು ಮಾಡಲು ಯತ್ನಿಸಿದ ಆರೋಪದ ಮೇಲೆ ಅವರ ವಿರುದ್ಧ ಸೆಕ್ಷನ್ 153ಎ ಅನ್ವಯ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಟ್ವಿಟರಿಗರಿಂದ ಕೇಳಿಬಂತು.

ಈ ಕಾರ್ಯಕ್ರಮ ಸರಕಾರಿ ಜಮೀನಿನ ಒತ್ತುವರಿ ಕುರಿತಂತೆ ಆಗಿದ್ದರೂ ಅಂತಿಮವಾಗಿ ಮುಸ್ಲಿಂ ಸಮುದಾಯವನ್ನು ತುಚ್ಛವಾಗಿಸುವ ಯತ್ನ ಈ ಕಾರ್ಯಕ್ರಮದ ಉದ್ದೇಶ ಎನ್ನುವ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News