ಅಮಿತ್ ಶಾ ಮುಷ್ಟಿಯೊಳಗಿರುವ ಗುಬ್ಬಚ್ಚಿ

Update: 2020-03-14 05:45 GMT

‘‘ಮುಷ್ಟಿಯೊಳಗೆ ಗುಬ್ಬಚ್ಚಿಯೊಂದನ್ನು ಮುಚ್ಚಿಟ್ಟು, ಇದು ಸತ್ತಿದೆಯೋ ಬದುಕಿದೆಯೋ?’’ ಎಂದು ಒಬ್ಬ ಕೇಳುತ್ತಾನೆ. ಯಾವ ಉತ್ತರ ಹೇಳಿದರೂ ಅದನ್ನು ಸುಳ್ಳು ಮಾಡುವ ಶಕ್ತಿ ಆತನಿಗಿದೆ. ಬದುಕಿದೆ ಎಂದರೆ, ಅಲ್ಲೇ ಅದನ್ನು ಅಮುಕಿ ‘ಇಲ್ಲ ಸತ್ತಿದೆ’ ಎನ್ನುತ್ತಾನೆ. ‘ಸತ್ತಿದೆ’ ಎಂದರೆ ‘ಇಲ್ಲ ಬದುಕಿದೆ’ ಎಂದು ಹಾರ ಬಿಡುತ್ತಾನೆ. ಆದರೆ ಮಾನವೀಯ ಮನುಷ್ಯನೊಬ್ಬ ‘ಸತ್ತಿದೆ’ ಎಂದು ಸುಳ್ಳು ಹೇಳಿ ಹಕ್ಕಿಯ ಜೀವ ಉಳಿಸಿದನಂತೆ. ಇದೀಗ ಅಮಿತ್ ಶಾ ಇಂತಹದೇ ಒಂದು ಪ್ರಶ್ನೆಯನ್ನು ದೇಶದ ಮುಂದಿಟ್ಟಿದ್ದಾರೆ. ಒಂದು ಸಣ್ಣ ವ್ಯತ್ಯಾಸದೊಂದಿಗೆ. ತಮ್ಮ ಮುಷ್ಟಿಯೊಳಗೆ ‘ಸಂವಿಧಾನ’ವೆಂಬ ಗುಬ್ಬಚ್ಚಿಯನ್ನು ಇಟ್ಟುಕೊಂಡು ‘‘ಸಂವಿಧಾನವನ್ನು ಸಾಯಿಸುವುದಿಲ್ಲ, ಅದು ಬದುಕಿದೆ’’ ಎಂದು ಘೋಷಣೆ ಮಾಡುತ್ತಿದ್ದಾರೆ. ‘‘ಹಾಗಾದರೆ ಅದನ್ನು ನೀವು ಮುಷ್ಟಿಯೊಳಗೆ ಯಾಕೆ ಇಟ್ಟುಕೊಂಡಿದ್ದೀರಿ? ಹಾರುವುದಕ್ಕೆ ಬಿಡಿ’’ ಎಂದು ಹೇಳಿದರೆ ಅದರಿಂದ ನುಣುಚಿಕೊಳ್ಳುತ್ತಾರೆ. ‘‘ಎನ್‌ಪಿಆರ್‌ನಲ್ಲಿ ಯಾವುದೇ ದಾಖಲೆ ಕೊಡಬೇಕಾಗಿಲ್ಲ, ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿಲ್ಲ’’ ಎಂದು ಅಮಿತ್ ಶಾ ಸಂಸತ್‌ಗೆ ತಿಳಿಸಿದ್ದಾರೆ. ‘ಎನ್‌ಪಿಆರ್’ ಎನ್ನುವುದು ಅಮಿತ್ ಶಾ ಅವರ ಮುಷ್ಟಿಯೊಳಗಿರುವ ಗುಬ್ಬಚ್ಚಿ. ‘‘ನೋಡಿ ಗುಬ್ಬಚ್ಚಿ ಜೀವಂತವಿದೆ’’ ಎಂದು ಅಮಿತ್ ಶಾ ದೇಶದ ಜನರ ಮನವೊಲಿಸುತ್ತಿದ್ದಾರೆ. ಆದರೆ ಎಲ್ಲಿಯವರೆಗೆ ಆ ಕಾಯ್ದೆ ಅಮಿತ್ ಶಾ ಮುಷ್ಟಿಯೊಳಗೆ ಇರುತ್ತದೆಯೋ ಅಲ್ಲಿಯವರೆಗೆ ಆ ಗುಬ್ಬಚ್ಚಿಯ ಪ್ರಾಣ ಅಪಾಯದಲ್ಲಿದೆ ಎಂದೇ ಅರ್ಥ.

ಹೈದರಾಬಾದ್‌ನಲ್ಲಿ ಇತ್ತೀಚೆಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು 120 ಮಂದಿಗೆ ‘‘ನಿಮ್ಮ ಪೌರತ್ವವನ್ನು ಸಾಬೀತು ಪಡಿಸಿ’’ ಎಂದು ನೋಟಿಸ್ ನೀಡಿರುವುದನ್ನು ನಾವು ಸ್ಮರಿಸಬೇಕಾಗಿದೆ. ‘ನಕಲಿ ದಾಖಲೆಗಳನ್ನು ನೀಡಿ ಆಧಾರ್ ಪಡೆದುಕೊಂಡಿದ್ದಾರೆ’ ಎಂಬ ಅನುಮಾನದ ಹಿನ್ನೆಲೆಯಲ್ಲಿ ಈ ಪ್ರಾಧಿಕಾರ ನೇರವಾಗಿ ಅವರ ಪೌರತ್ವವನ್ನೇ ಪ್ರಶ್ನಿಸಿತ್ತು. ಆಧಾರ್‌ಗಾಗಿ ನೀಡಿರುವ ಯಾವ ದಾಖಲೆ ನಕಲಿಯಿದೆಯೋ ಅವುಗಳ ಅಸಲಿತನವನ್ನು ಸಾಬೀತು ಪಡಿಸಿ ಎಂದು ಕೇಳುವ ಬದಲು, ದಾಖಲೆಗಳು ನಕಲಿ ಎನ್ನುವುದನ್ನೇ ಮುಂದಿಟ್ಟುಕೊಂಡು ‘‘ನೀವು ಈ ದೇಶದ ಪೌರರೆನ್ನುವುದನ್ನು ಸಾಬೀತು ಪಡಿಸಿದರೆ ಮಾತ್ರ ಆಧಾರ್ ಸಿಗುತ್ತದೆ’’ ಎಂಬ ನೋಟಿಸ್ ಜಾರಿಗೊಳಿಸಿತು. ಪ್ರಾಧಿಕಾರದ ಕೆಲಸ ಜನರಿಗೆ ಪೌರತ್ವವನ್ನು ನೀಡುವುದು ಆಗಿರದೇ ಇದ್ದರೂ ಇಂತಹದೊಂದು ಆಚಾತುರ್ಯವನ್ನು ಅಥವಾ ಮಾನಸಿಕವಾಗಿ ದೌರ್ಜನ್ಯ ನಡೆಸಲು ಇಂತಹದೊಂದು ಕೃತ್ಯವನ್ನು ಅಧಿಕಾರಿಗಳು ಎಸಗಿದರು. ಇದೀಗ ಅಮಿತ್ ಶಾ ‘‘ಎನ್‌ಪಿಆರ್‌ಗೆ ದಾಖಲೆ ಕೊಡಬೇಕಾಗಿಲ್ಲ, ನನ್ನನ್ನು ನಂಬಿ’’ ಎಂದು ಹೇಳುತ್ತಿದ್ದಾರೆ.

ನಿಜ, ಎನ್‌ಪಿಆರ್ ಕೇಳುವ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡದೇ ಇರುವ ಮತ್ತು ದಾಖಲೆಗಳನ್ನು ಒದಗಿಸದೇ ಇರುವ ಅವಕಾಶ ನಮಗಿದೆ. ಆದರೆ ಆ ಬಳಿಕ ನಡೆಯಲಿರುವ ಪ್ರಕ್ರಿಯೆಗಳ ಬಗ್ಗೆ ಅಮಿತ್ ಶಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆಧಾರ್ ಕಾರ್ಡ್‌ನ ಹೆಸರಲ್ಲಿ ಪ್ರಾಧಿಕಾರವೊಂದು ಒಬ್ಬನ ಪೌರತ್ವವನ್ನು ಸಂಶಯಿಸಬಹುದಾದರೆ, ಎನ್‌ಪಿಆರ್ ದಾಖಲೀಕರಣ ನಡೆದ ಬಳಿಕ, ತನಗೆ ತೋಚಿದ ಅಥವಾ ಅನುಮಾನವಿರುವ ಜನರಿಗೆ ‘‘ನಿಮ್ಮ ಪೌರತ್ವಕ್ಕೆ ಪೂರಕವಾಗಿರುವ ದಾಖಲೆಗಳು ಸಿಕ್ಕಿಲ್ಲ. ಆದುದರಿಂದ ಸೂಕ್ತ ದಾಖಲೆಗಳನ್ನು ಒದಗಿಸಿ’’ ಎಂದು ಯಾವುದೇ ಪ್ರಜೆಯೊಬ್ಬನಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಅಮಿತ್ ಶಾ ಅವರ ಮಾತುಗಳ ಆಧಾರದಲ್ಲಿ ಈ ನೋಂದಣಿ ನಡೆಯುವುದಿಲ್ಲ. ಕಾಯ್ದೆಗೆ ಅನುಗುಣವಾಗಿ ಈ ನೋಟಿಸ್‌ಗಳು ಜಾರಿಗೊಳ್ಳುತ್ತವೆ. ಎನ್‌ಪಿಆರ್ ಸಂದರ್ಭದಲ್ಲಿ ಈವರೆಗೆ ಇಲ್ಲದ ಕೆಲವು ಪ್ರಶ್ನೆಗಳು ಸರಕಾರ ಯಾತಕ್ಕೆ ಸೇರಿಸಿದೆ ಎನ್ನುವುದನ್ನು ಸ್ಪಷ್ಟ ಪಡಿಸುವವರೆಗೂ ಗುಬ್ಬಚ್ಚಿಯ ಪ್ರಾಣ ಅಪಾಯದಲ್ಲೇ ಇರುತ್ತದೆ.

ಪೌರತ್ವ ನೋಂದಣಿ ಕಾಯ್ದೆ 2003ರ ಪ್ರಕಾರ ರಾಷ್ಟ್ರೀಯ ಪೌರತ್ವ ನೋಂದಣಿಯ ಪಟ್ಟಿಯನ್ನು ತಯಾರಿಸುವ ಸಲುವಾಗಿ ದೇಶದಲ್ಲಿ ವಾಸಿಸುತ್ತಿರುವ ಎಲ್ಲ ವ್ಯಕ್ತಿಗಳ ಮತ್ತು ಕುಟುಂಬಗಳ ಪೌರತ್ವ ವಿವರಗಳನ್ನು ಒಳಗೊಂಡಂತೆ ಅಗತ್ಯವಿರುವ ಎಲ್ಲ ವಿವರಗಳನ್ನು ಸಂಗ್ರಹಿಸಬಹುದು. ಇದರ ಉಪನಿಯಮ 4-3ರ ಪ್ರಕಾರ, ಎನ್‌ಪಿಆರ್‌ನಲ್ಲಿ ಸಂಗ್ರಹಿಸಲಾದ ವ್ಯಕ್ತಿ ಮತ್ತು ಕುಟುಂಬಗಳ ವಿವರಗಳನ್ನು ಸ್ಥಳೀಯ ನಾಗರಿಕ ನೋಂದಣಿ ರಿಜಿಸ್ಟ್ರಾರ್ ಅಥವಾ ತಹಶೀಲ್ದಾರರು ಪರಿಶೀಲಿಸುತ್ತಾರೆ ಮತ್ತು ಈ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯ ಪೌರತ್ವದ ಬಗ್ಗೆ ಅಥವಾ ಸೂಕ್ತ ದಾಖಲೆಗಳ ಬಗ್ಗೆ ಅನುಮಾನ ಬಂದರೆ ಆ ವ್ಯಕ್ತಿಗೆ ನೋಟಿಸ್ ಜಾರಿ ಗೊಳಿಸಿ ಪೌರತ್ವದ ಕುರಿತು ಅವರ ಅನುಮಾನಗಳನ್ನು ಪರಿಹರಿಸಬೇಕು. ಹತ್ತು ದಾಖಲೆಗಳನ್ನು ಕೊಟ್ಟೂ ಪೌರತ್ವ ನಿರಾಕರಣೆಗೊಂಡ ಪ್ರಕರಣಗಳು ಅಸ್ಸಾಮಿನಲ್ಲಿವೆ. ಹೀಗಿರುವಾಗ, ಎನ್‌ಪಿಆರ್‌ನಲ್ಲಿ ದಾಖಲಾದ ಮಾಹಿತಿಗಳು ನಮಗೆ ಸಾಕಾಗುವುದಿಲ್ಲ ಎಂದು ಅಧಿಕಾರಿಗಳು ಕಾಯ್ದೆಯನ್ನು ಬಳಸಿಕೊಂಡು ದೇಶದ ಯಾವುದೇ ಧರ್ಮದ ಪ್ರಜೆಗಳಿಗೆ ಕಿರುಕುಳ ನೀಡಿದರೆ ಅದಕ್ಕೆ ಅಮಿತ್ ಶಾ ಯಾವ ರೀತಿಯ ಪರಿಹಾರವನ್ನು ನೀಡುತ್ತಾರೆ?

ಎನ್‌ಪಿಆರ್‌ನ ದಾಖಲೆಗಳನ್ನು ಬಳಸಿಕೊಂಡೇ ಒಬ್ಬ ಪ್ರಜೆಯ ಪೌರತ್ವವನ್ನು ಅನುಮಾನಿಸುವ ಅಧಿಕಾರವನ್ನು ತನ್ನೊಳಗೆ ಇರಿಸಿಕೊಂಡು ‘ನೀವು ದಾಖಲೆಗಳನ್ನು ನೀಡುವ ಅಗತ್ಯ ಇಲ್ಲ’ ಎನ್ನುವ ಅಮಿತ್ ಶಾ ಅವರ ಮಾತುಗಳೇ ಸೋಗಲಾಡಿತನದಿಂದ ಕೂಡಿರುವುದು. ಅವರಿಗೆ ಎನ್‌ಪಿಆರ್‌ನ್ನು ಯಾವ ರೀತಿಯಲ್ಲಾದರೂ ಯಶಸ್ವಿಗೊಳಿಸಬೇಕು. ಒಮ್ಮೆ ಈ ದೇಶದ ಪ್ರಜೆಗಳು ಎನ್‌ಪಿಆರ್‌ನ ಬೋನಿನೊಳಗೆ ಬಿದ್ದರೆ, ಅವರು ಈ ದೇಶದ ಅಧಿಕಾರಶಾಹಿಯ ಮುಷ್ಟಿಯೊಳಗಿರುವ ಗುಬ್ಬಚ್ಚಿಯಂತೆ. ಸಾಯಬೇಕೋ, ಉಳಿಸಬೇಕೋ ಎನ್ನುವುದು ಅವರ ಕೈಯಲ್ಲಿರುತ್ತದೆ. ಆದುದರಿಂದ ಎಲ್ಲಿಯವರೆಗೆ, ಸಿಎಎ ಮತ್ತು ಎನ್‌ಆರ್‌ಸಿಗೆ ಪೂರಕವಾಗಿರುವ ಕಾಯ್ದೆಯನ್ನು ಸರಕಾರ ಹಿಂದೆಗೆಯುವುದಿಲ್ಲವೋ ಅಲ್ಲಿಯವರೆಗೆ ಎನ್‌ಪಿಆರ್‌ಗೆ ಮಾಹಿತಿಗಳನ್ನು ನೀಡಿ ಅದಕ್ಕೆ ತಮ್ಮ ಮುದ್ರೆ ಒತ್ತುವ ಸಾಹಸಕ್ಕೆ ದೇಶದ ಜನರು ಮುಂದಾಗಬಾರದು. ಎನ್‌ಪಿಆರ್ ಉರುಳಿಗೆ ಸಿಕ್ಕಿ ಹಾಕಿಕೊಂಡರೆ, ಅದು ನೇರವಾಗಿ ನಮ್ಮ ಕುತ್ತಿಗೆಗೆ ಎನ್‌ಆರ್‌ಸಿ ಉರುಳು ಬೀಳುವುದಕ್ಕೆ ಕಾರಣವಾಗುತ್ತದೆ. ಇಂದು ಅಮಿತ್ ಶಾ ಮುಷ್ಟಿಯೊಳಗಿರುವುದು ಈ ದೇಶದ ಸಂವಿಧಾನ ಎನ್ನುವಂತಹ ಗುಬ್ಬಚ್ಚಿ. ಆದರೆ ಅದರ ಪ್ರಾಣವಿರುವುದು ಈ ದೇಶದ ಪ್ರಜೆಗಳ ಕೈಯಲ್ಲಿ. ಒಂದಾಗಿ ಧ್ವನಿಯೆತ್ತಿದರೆ ಮಾತ್ರ ಅಮಿತ್ ಶಾ ಹಕ್ಕಿಯನ್ನು ಹಾರುವುದಕ್ಕೆ ಬಿಟ್ಟಾರು. ಇಲ್ಲದೇ ಹೋದರೆ ಜನರು ಗುಬ್ಬಚ್ಚಿ ಬದುಕಿದೆ ಎಂದು ತಮಗೆ ತಾವೇ ಸಮಾಧಾನ ಪಟ್ಟುಕೊಳ್ಳುತ್ತಿರುವಾಗಲೇ ಅದರ ಪ್ರಾಣ ಅಮಿತ್ ಶಾ ಅವರ ಮುಷ್ಟಿಯೊಳಗೆ ಹರಣವಾಗಬಹುದು. ಆ ಬಳಿಕ ಅದೆಷ್ಟು ಚೀರಾಡಿದರು ಹೋದ ಪ್ರಾಣವನ್ನು ತರಿಸಿಕೊಳ್ಳಲು ಸಾಧ್ಯವಾಗದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News