ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಆರ್‌ಬಿಐ ಪರಿಹಾರ ಪ್ರಸ್ತಾವ: ಕೇಂದ್ರ ಸಚಿವ ಸಂಪುಟ ಅಸ್ತು
ಹೊಸದಿಲ್ಲಿ, ಮಾ.14: ಹಗರಣದಲ್ಲ್ಲಿ ಸಿಲುಕಿರುವ ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿಟ್ಟಿರುವ ಪರಿಹಾರ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ತನ್ನ ಸಮ್ಮತಿ ನೀಡಿದೆ. ಯೆಸ್ ಬ್ಯಾಂಕ್ ಖಾತೆಯಿಂದ 50,000ಕ್ಕಿಂತ ಹೆಚ್ಚು ಹಣ ಡ್ರಾ ಮಾಡಲು ವಿಧಿಸಲಾಗಿದ್ದ ನಿರ್ಬಂಧವನ್ನು ಬುಧವಾರದಿಂದ ಸಡಿಸಲಾಗಿದೆ.
ಈ ತಿಂಗಳಾರಂಭದಲ್ಲಿ ಆರ್‌ಬಿಐ, ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ತನ್ನ ಹಿಡಿತಕ್ಕೆ ಪಡೆದು ಎಪ್ರಿಲ್ 3ರ ತನಕ 50,000 ರೂ.ಗಿಂತ ಹೆಚ್ಚು ಹಣ ಡ್ರಾ ಮಾಡದಂತೆ ನಿರ್ಬಂಧ ವಿಧಿಸಿತ್ತು. ಇದರಿಂದಾಗಿ ಸಾವಿರಾರು ಯೆಸ್ ಬ್ಯಾಂಕ್ ಠೇವಣಿದಾರರಿಗೆ ಸಮಸ್ಯೆಯಾಗಿತ್ತು. ಆರ್‌ಬಿಐನ ದಿಢೀರ್ ಕ್ರಮದಿಂದಾಗಿ ಯೆಸ್ ಬ್ಯಾಂಕ್ ಗ್ರಾಹಕರಿಗೆ ಇಂಟರ್‌ನೆಟ್ ಬ್ಯಾಂಕಿಂಗ್, ಯುಪಿಐ ಬಳಕೆ ಹಾಗೂ ಎಟಿಎಂನಿಂದ ಹಣ ಹಿಂಪಡೆಯಲು ಸಮಸ್ಯೆಯಾಗಿತ್ತು.
ಬ್ಯಾಂಕ್‌ನ ಠೇವಣಿದಾರರ ಹಿತಾಸಕ್ತಿ ರಕ್ಷಿಸುವ ಯೆಸ್ ಬ್ಯಾಂಕ್ ಸೇರಿದಂತೆ ದೇಶದ ಒಟ್ಟಾರೆ ಬ್ಯಾಂಕಿಂಗ್ ವ್ಯವಸ್ಥೆಗೆ, ಹಣಕಾಸು ಪರಿಸ್ಥಿತಿಗೆ ಸ್ಥಿರತೆ ಒದಗಿಸುವ ಉದ್ದೇಶದಿಂದ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್‌ನ ಶೇ.49ರಷ್ಟು ಪಾಲು ಬಂಡವಾಳವನ್ನು ಖರೀದಿಸಲಿದೆ. ಇತರ ಹೂಡಿಕೆದಾರರನ್ನು ಆಹ್ವಾನಿಸಲಾಗುವುದು. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಹೂಡಿಕೆಗೆ ಮೂರು ವರ್ಷಗಳ ನಿರ್ಬಂಧ ಇರುತ್ತದೆ. ಈ ಅವಧಿಯಲ್ಲಿ ಹೂಡಿಕೆಯ ಹಣ ಹಿಂಪಡೆಯಲು ಅವಕಾಶ ಇರುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.