×
Ad

ಮುಸ್ಲಿಮರ ಮೇಲೆ ಗುಂಡು ಹಾರಿಸಿದ್ದನ್ನು ಪೊಲೀಸರ ಮೇಲೆ ದಾಳಿ ಎಂದು ವರದಿ ಮಾಡಿದ 'ಟೈಮ್ಸ್ ನೌ'

Update: 2020-03-14 12:43 IST

ಹೊಸದಿಲ್ಲಿ : ಕೆಂಪು ಬಣ್ಣದ ಶರ್ಟ್, ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ದಿಲ್ಲಿ ಹಿಂಸಾಚಾರದ ವೇಳೆ ಗುಂಡು ಹಾರಿಸುತ್ತಿರುವ ದೃಶ್ಯದ ವೀಡಿಯೊವೊಂದನ್ನು ಟೈಮ್ಸ್ ನೌ ವಾಹಿನಿ ಮಾ. 5ರಂದು ಪ್ರಸಾರ ಮಾಡಿತ್ತು. ''ಹಿಂಸೆ ಕುರಿತಾದ ಹೊಸ ವೀಡಿಯೊ ಹೊರಬಿದ್ದಿದೆ. ವೀಡಿಯೊ ಮೌಜ್ಪುರ್ ಪ್ರದೇಶದ್ದು ಎಂದು ಹೇಳಲಾಗಿದೆ. 

ಇದು  ಪೊಲೀಸರ ಮೇಲೆ ನಡೆಸಿದ ದಾಳಿ ಕುರಿತಾದ ನಾಲ್ಕನೇ ವೀಡಿಯೋ,'' ಎಂದು ವೀಡಿಯೊ ಪ್ರಸಾರದ ವೇಳೆ ಟೈಮ್ಸ್ ನೌ ಹೇಳಿತ್ತು. #ಶಾಹೀನ್‍ಲಿಂಚ್‍ಮಾಡೆಲ್ ಎಂಬ ಹ್ಯಾಶ್ ಟ್ಯಾಗ್‍ನೊಂದಿಗೆ ವೀಡಿಯೊ ಪ್ರಸಾರಗೊಂಡಿತ್ತು.

ಈ ವೀಡಿಯೊ ಪ್ರಸಾರವಾಗುತ್ತಿದ್ದಂತೆಯೇ ಟೈಮ್ಸ್ ನೌ ಪ್ರತಿನಿಧಿ ಪ್ರಾಣೇಶ್ ವೀಕ್ಷಕ ವಿವರಣೆ ನೀಡುವ ಹಾಗೆ ಘಟನಾವಳಿ ಕುರಿತಂತೆ ಹೇಳಿದ್ದರು. ''ಜನರು ಕಲ್ಲು ತೂರಾಟ ನಡೆಸುತ್ತಿದ್ದಾರೆ ಹಾಗೂ  ಇದರಿಂದ ಆತನಿಗೂ ಗಾಯಗಳಾಗಬಹುದೆಂದು ಆತ ಹೆಲ್ಮೆಟ್ ಧರಿಸಿರಬಹುದು. ಆದರೆ ತನ್ನ ಗುರುತು ತಿಳಿಯದೇ ಇರಲಿ ಎಂದು ಆತ ಹೆಲ್ಮೆಟ್ ಧರಿಸಿದ್ದಾನೆಂದು ಹಲವು ಜನರು ನಂಬಿದ್ದಾರೆ, ಇದು ಪೊಲೀಸರ ಮೇಲಿನ ದಾಳಿಯ ಎರಡನೇ ವೀಡಿಯೊ'' ಎಂದು  ಆತ ಹೇಳುತ್ತಾರೆ, ಆತ ಇದು ಎರಡನೇ  ದಾಳಿ ಎಂದಿದ್ದರೆ ಟೈಮ್ಸ್ ನೌ ಟ್ವೀಟ್ ಪ್ರಕಾರ ಇದು ಪೊಲೀಸರ ಮೇಲಿನ ನಾಲ್ಕನೇ ದಾಳಿ.

ಮರುದಿನ ಇದೇ ವೀಡಿಯೊ ಪೋಸ್ಟ್ ಮಾಡಿದ ಬಿಜೆಪಿ ಐಟಿ ಘಟಕ ಮುಖ್ಯಸ್ಥ ಅಮಿತ್ ಮಾಲವಿಯ ಗುಂಡು ಹಾರಿಸಿದಾತ ಮುಸ್ಲಿಂ ಸಮುದಾಯದವ ಎಂದೂ ಬರೆದಿದ್ದಾರೆ. ''ಇನ್ನೊಬ್ಬ ಶಾಂತಿಯುತ ಪ್ರತಿಭಟನಾಕಾರ ಪೊಲೀಸರತ್ತ ಗುಂಡು ಹಾರಿಸುತ್ತಿರುವುದು,'' ಎಂದು ಅವರು ಬರೆದಿದ್ದಾರೆ. ಈ ವೀಡಿಯೊವನ್ನು 9,000ಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ.

ವಾಸ್ತವವೇ ನು ?

ಟೈಮ್ಸ್ ನೌ ಈ ವೀಡಿಯೊ ಕುರಿತಂತೆ ನೀಡಿದ ವಿವರಣೆ ಸುಳ್ಳೆಂದು ಆಲ್ಟ್ ನ್ಯೂಸ್ ಸಾಬೀತು ಪಡಿಸಿದೆ.

ಇದೇ ಕ್ಲಿಪ್ ಹೊಂದಿರುವ ಆದರೆ ಇದಕ್ಕಿಂತಲೂ ದೀರ್ಘಾವಧಿಯ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಫೆ. 25ರಿಂದ  ಹರಿದಾಡುತ್ತಿತ್ತು. ಈ ವೀಡಿಯೊ ಶೇರ್ ಮಾಡಿದ್ದ ಟ್ವಿಟ್ಟರಿಗರೊಬ್ಬರು ಆರೆಸ್ಸೆಸ್ ಮತ್ತು ಬಜರಂಗದಳ ಸದಸ್ಯರು ವಿಜಯ್ ಪಾರ್ಕ್ ನಲ್ಲಿ ಮುಸ್ಲಿಮರತ್ತ ಗುಂಡು ಹಾರಿಸುತ್ತಿರುವುದು ಎಂದು ವಿವರಣೆ ನೀಡಿದ್ದರು. ಇದೇ ವೀಡಿಯೊದ 14 ಸೆಕೆಂಡ್ ನಂತರದ ಕ್ಲಿಪ್ ಅನ್ನು ಟೈಮ್ಸ್ ನೌ ಮತ್ತು ಅಮಿತ್ ಮಾಲವಿಯ ಶೇರ್ ಮಾಡಿದ್ದರು. ಈ ವೀಡಿಯೊ ಕೂಲಂಕಷವಾಗಿ ಗಮನಿಸಿದಾಗ ಜೈನ್ ಫರ್ನಿಚರ್ ಹಾಗೂ ನೆಕ್ಸಾ ಡೆಂಟಲ್ ಮಳಿಗೆಗಳ ನಾಮಫಲಕ ಕಾಣಿಸುತ್ತವೆ. ಈ ಮಳಿಗೆಗಳು ಮೌಜ್ಪುರ್ ನ ವಿಜಯ್ ಪಾರ್ಕ್ ನಲ್ಲಿದೆ. ಟೈಮ್ಸ್ ನೌ ವಾಹಿನಿ ಸ್ಥಳದ ಕುರಿತು ಸರಿಯಾದ ಮಾಹಿತಿ ನೀಡಿದೆ.

ಈ ವೀಡಿಯೊ ತೆಗೆದ ವ್ಯಕ್ತಿಯನ್ನೂ ಆಲ್ಟ್ ನ್ಯೂಸ್ ಪತ್ತೆ ಹಚ್ಚಲು ಸಫಲವಾಗಿದ್ದು ಆ ವ್ಯಕ್ತಿ  ಫೆ. 25ರಂದು ನಡೆದ ಘಟನೆಯ ವೀಡಿಯೊವನ್ನು ಸ್ನ್ಯಾಪ್ ಚ್ಯಾಟ್‍ಗೆ 12.12ಕ್ಕೆ ಅಪ್ಲೋಡ್ ಮಾಡಿ ಮೆಮೊರೀಸ್ ಸೆಕ್ಷನ್ ನಲ್ಲಿ ಸೇವ್ ಮಾಡಿದ್ದರು. ಇದೇ ವೀಡಿಯೊದ 14 ಸೆಕೆಂಡ್ ಅವಧಿಯ ಕ್ಲಿಪ್ ಅನ್ನು ಅಮಿತ್ ಮಾಲವಿಯ ಮತ್ತು ಟೈಮ್ಸ್ ನೌ ಶೇರ್ ಮಾಡಿದ್ದರು.

ಈ ವೀಡಿಯೊವನ್ನು ಸ್ನ್ಯಾಪ್ ಚ್ಯಾಟ್‍ಗೆ ಅಪ್ಲೋಡ್ ಮಾಡುವ ಮೊದಲು ವೀಡಿಯೊ ತೆಗೆದ ವ್ಯಕ್ತಿ ಇನ್ನೊಂದು ವೀಡಿಯೊ ಅಪ್ಲೋಡ್ ಮಾಡಿದ್ದರು ಅದರಲ್ಲಿ ಸ್ಥಳದಲ್ಲಿ ಭಾರೀ ಜನರಿರುವುದು ಕಾಣಿಸುತ್ತದೆ. ಗುಂಡು ಹಾರಿಸಿದ ಕೆಂಪು ಶರ್ಟ್ ಧರಿಸಿದ ವ್ಯಕ್ತಿ ನಂತರ ಪೊಲೀಸರತ್ತ ಧಾವಿಸುತ್ತಿರುವುದು ಕಾಣಿಸುತ್ತದೆ. ಆತ ಸಿಎಎ ವಿರೋಧಿ ಪ್ರತಿಭಟನಾಕಾರನಾಗಿದ್ದರೆ ಪೊಲೀಸರತ್ತ ಏಕೆ ಓಡುತ್ತಿದ್ದಾನೆಂಬ ಪ್ರಶ್ನೆ ಎದ್ದೇ ಏಳುತ್ತದೆ. ಆ ದಿನ ಆ ಪ್ರದೇಶದಲ್ಲಿ ವರದಿ ಮಾಡುತ್ತಿದ್ದ ಕೆಲ ಪತ್ರಕರ್ತರು ಹಾಗೂ ಸ್ಥಳೀಯರು ಕೂಡ ಗುಂಡು ಹಾರಿಸಿದ ವ್ಯಕ್ತಿ ಸಿಎಎ ಪರ ಹೋರಾಟಗಾರನಾಗಿದ್ದನೆಂದು ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News