ತಮ್ಮದೇ ಪುತ್ಥಳಿ ನಿರ್ಮಿಸಿಕೊಂಡ ಶಾಸಕ : ಕಾರಣ ಏನು ಗೊತ್ತೇ ?

Update: 2020-03-14 07:40 GMT

ಕೊಲ್ಕತ್ತಾ: ತಾನು ಹತ್ಯೆಯಾದರೆ ಜನ ತನ್ನನ್ನು ನೆನೆಸಿಕೊಳ್ಳಲಿ ಎಂಬ ಕಾರಣಕ್ಕೆ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕರೊಬ್ಬರು ತಮ್ಮದೇ ಪುತ್ಥಳಿಯನ್ನು ನಿರ್ಮಿಸಿಕೊಂಡಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಗೋಸಬ ಕ್ಷೇತ್ರದಿಂದ ಎರಡು ಬಾರಿ ಬಂಗಾಳ ವಿಧಾನಸಭೆಗೆ ಆಯ್ಕೆಯಾಗಿರುವ 71 ವರ್ಷ ವಯಸ್ಸಿನ ಜಯಂತ್ ನಾಸ್ಕರ್, ಮೂರು ವರ್ಷದ ಹಿಂದೆ ಕುಮಾರ್ತುಲಿಯ ಶಿಲ್ಪಿಯೊಬ್ಬರನ್ನು ನೇಮಿಸಿಕೊಂಡು ತಮ್ಮದೇ ನೈಜ ಗಾತ್ರದ ಎರಡು ಪುತ್ಥಳಿಗಳ ನಿರ್ಮಾಣಕ್ಕೆ ಸೂಚಿಸಿದ್ದರು. ಫೈಬರ್‌ಗ್ಲಾಸ್ ಮತ್ತು ಆವೆಮಣ್ಣಿನಿಂದ ಈ ಪುತ್ಥಳಿ ನಿರ್ಮಿಸಲಾಗಿದೆ.

ಅಲೀಪುರ ಕೇಂದ್ರೀಯ ಸುಧಾರಣಾಗೃಹದಿಂದ ನಾಲ್ವರು ಅಪರಾಧಿಗಳು ತಪ್ಪಿಸಿಕೊಂಡಿದ್ದರು. ಅವರನ್ನು ಬಂಧಿಸಿದ ಬಳಿಕ ವಿಚಾರಣೆಗೆ ಗುರಿಪಡಿಸಿದಾಗ, ಸ್ಥಳೀಯ ರಾಜಕಾರಣಿಗಳು ನನ್ನನ್ನು ಹತ್ಯೆ ಮಾಡಲು ಅವರನ್ನು ಬಾಡಿಗೆಗೆ ಪಡೆದಿದ್ದರು ಎನ್ನುವುದು ತಿಳಿದುಬಂದಿದೆ. ಈ ಬಗ್ಗೆ ಜಿಲ್ಲಾ ಎಸ್ಪಿ ಪ್ರವೀಣ್ ತ್ರಿಪಾಠಿ ಮಾಹಿತಿ ನೀಡಿದ್ದರು. ರಾಜ್ಯ ಸರ್ಕಾರ ನನ್ನ ಭದ್ರತೆಯನ್ನು ವೈ ವರ್ಗಕ್ಕೆ ಹೆಚ್ಚಿಸಿತ್ತು ಎಂದು 11 ಮಂದಿ ಪೊಲೀಸರ ರಕ್ಷಣೆ ಇರುವ ನಾಸ್ಕರ್ ಹೇಳುತ್ತಾರೆ.

ಆದ್ದರಿಂದ ನಾನು ಹತ್ಯೆಯಾದರೆ ಜನ ನನ್ನನ್ನು ನೆನಪಿನಲ್ಲಿ ಇಟ್ಟುಕೊಳ್ಳಲಿ ಎಂಬ ಕಾರಣಕ್ಕೆ ಪುತ್ಥಳಿ ನಿರ್ಮಾಣಕ್ಕೆ ಸೂಚಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಟಿಎಂಸಿ ಆರಂಭದಿಂದಲೂ ಪಕ್ಷದಲ್ಲಿರುವ ಇವರ ಕುಟುಂಬದ ಸದಸ್ಯರು ಕೂಡಾ ಶಾಸಕರ ಹತ್ಯೆಯಾಗಬಹುದು ಎಂಬ ಭೀತಿಯಲ್ಲಿದ್ದಾರೆ. ಪಕ್ಷದಲ್ಲೇ ನಮಗೆ ವೈರಿಗಳಿದ್ದಾರೆ. ಇವರು ಮೊದಲು ಇತರ ಪಕ್ಷಗಳಲ್ಲಿದ್ದರು. ಆ ಕಾಲದಿಂದಲೂ ನಮಗೆ ಶತ್ರುಗಳಾಗಿದ್ದರು ಎಂದು ಅವರು ವಿವರಿಸಿದ್ದಾರೆ.

ಐದು ಬಾರಿ ಶಿಲ್ಪಿಯ ಜತೆಗೆ ಸಮಾಲೋಚನೆ ನಡೆಸಿ ಯಥಾವತ್ ಪ್ರತಿಮೆ ಸ್ಥಾಪನೆಗೆ ಅಗತ್ಯ ಸಲಹೆ ನೀಡಿದ್ದಾಗಿ ಅವರು ವಿವರಿಸಿದ್ದಾರೆ. ಈ ಪ್ರತಿಮೆಗಳನ್ನು ನಿರ್ಮಿಸಿ ಮನೆಯ ನೆಲಮಹಡಿಯಲ್ಲೇ ಇಟ್ಟಿದ್ದೆ. ಇತ್ತೀಚೆಗೆ ಕೆಲವರು ಇದರ ಫೋಟೊ ಕ್ಲಿಕ್ಕಿಸಿಕೊಂಡರು. ಅದು ನನಗೆ ಮುಜುಗರ ತಂದಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News