ಕೊರೋನವೈರಸ್ ಹಿನ್ನೆಲೆ: ಮುಚ್ಚಿರುವ ಅಂಗನವಾಡಿಯ ಮಕ್ಕಳ ಮನೆಬಾಗಿಲಿಗೆ ಪೌಷ್ಠಿಕ ಆಹಾರ ತಲುಪಿಸಲಿರುವ ಕೇರಳ ಸರಕಾರ

Update: 2020-03-14 10:32 GMT
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಕೊರೋನವೈರಸ್  ತಡೆಗಟ್ಟಲು ಮುಂಜಾಗರೂಕತಾ ಕ್ರಮವಾಗಿ ಕೇರಳ ಸರಕಾರ ಅಲ್ಲಿನ 33,000 ಅಂಗನವಾಡಿಗಳನ್ನು ಮುಚ್ಚಿಸಿದ್ದರೂ ಅಂಗನವಾಡಿಯ ಮಕ್ಕಳು ಪೌಷ್ಠಿಕಾಂಶಯುಕ್ತ ಆಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಸಲುವಾಗಿ ಆಹಾರ ಸಾಮಗ್ರಿಗಳನ್ನು ಮಕ್ಕಳ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ.

"ಮಕ್ಕಳ ಹೆತ್ತವರು ಅಂಗನವಾಡಿಗಳಿಗೆ ತೆರಳಿ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು ಅಥವಾ ಶಿಕ್ಷಕರು ಮುಂದಿನ ಎರಡು ವಾರಗಳ ಕಾಲ ಅವುಗಳನ್ನು ಮಕ್ಕಳ ಮನೆಗೆ ತಲುಪಿಸಬಹುದು, ಆದರೆ ಬೇಯಿಸಿದ ಆಹಾರ ಈ ರೀತಿ ಒದಗಿಸುವ ಯೋಜನೆಯಿಲ್ಲ,'' ಎಂದು ಸರಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇರಳ ಸರಕಾರದ ಸಾಮಾಜಿಕ ನ್ಯಾಯ ಇಲಾಖೆಯು ಪ್ರತಿ ಮಕ್ಕಳಿಗೆ ಮಧ್ಯಾಹ್ನದ ಊಟದ ಸಲುವಾಗಿ 60 ಗ್ರಾಂ ಅಕ್ಕಿ, 50 ಗ್ರಾಂ ಗೋಧಿ, 20 ಗ್ರಾಂ ಹೆಸರುಕಾಳು, 5 ಗ್ರಾಂ ಉದ್ದಿನ ಬೇಳೆ ಹಾಗೂ 5 ಗ್ರಾಂ ಅಡುಗೆ ಎಣ್ಣೆ ಒದಗಿಸುತ್ತಿದೆ. ಈಗ ಈ ಸಾಮಗ್ರಿಗಳು ಮಕ್ಕಳ ಮನೆಬಾಗಿಲಿಗೆ ತಲುಪಲಿದೆ.

ಅದೇ ಸಮಯ ಅಂಗನವಾಡಿಗಳ ಮುಖಾಂತರ ಗರ್ಭಿಣಿಯರಿಗೆ ಹಾಗೂ ಹದಿಹರೆಯದವರಿಗೆ ಒದಗಿಸಲಾಗುವ ಪೌಷ್ಠಿಕ ಆಹಾರ ಸಾಮಗ್ರಿಗಳು ಎಂದಿನಂತೆ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News