ಕೊರೋನ ಶಂಕಿತ ರೋಗಿಗಳು ಆಸ್ಪತ್ರೆಯಿಂದ ಪರಾರಿ
ಹೊಸದಿಲ್ಲಿ, ಮಾ. 14: ಕೊರೋನ ಸೋಂಕಿತರೆಂದು ಶಂಕಿಸಲಾಗಿರುವ ಐವರು ಮಹಾರಾಷ್ಟ್ರದ ನಾಗಪುರದ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಗರದ ಮೇಯೊ ಜನರಲ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಿಂದ ಕೊರೋನ ಶಂಕಿತರು ನಾಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ‘‘ಇವರಲ್ಲಿ ಒಬ್ಬರಿಗೆ ಕೊರೋನ ಸೋಂಕು ತಗಲಿಲ್ಲ ಎಂದು ವರದಿ ಹೇಳಿದೆ. ಉಳಿದ ನಾಲ್ವರ ವರದಿಗಾಗಿ ಕಾಯಲಾಗುತ್ತಿದೆ. ನಾವು ಅವರನ್ನು ಪತ್ತೆ ಹಚ್ಚಲಿದ್ದೇವೆ ಹಾಗೂ ಮತ್ತೆ ಆಸ್ಪತ್ರೆಗೆ ಹಿಂದೆ ತರಲಿದ್ದೇವೆ’’ ಎಂದು ನಾಗಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಸ್. ಸೂರ್ಯವಂಶಿ ಹೇಳಿದ್ದಾರೆ.
ಮಾರ್ಚ್ 6ರಂದು ಅಮೆರಿಕದಿಂದ ಹಿಂದಿರುಗಿದ್ದ ಸಾಫ್ಟವೇರ್ ಉದ್ಯೋಗಿಗೆ ಕೊರೋನ ಸೋಂಕು ಇರುವುದು ಬುಧವಾರ ದೃಢಪಟ್ಟಿತ್ತು. ಇದು ರಾಜ್ಯದಲ್ಲಿ ಪತ್ತೆಯಾದ ಮೊದಲ ಕೊರೋನ ಸೋಂಕು ಪ್ರಕರಣ. ಅನಂತರ ಅವರನ್ನು ಮೇಯೊ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ನಾಗಪುರದಲ್ಲಿ ಇಬ್ಬರು, ಮುಂಬೈ, ಪುಣೆ, ಅಹ್ಮದ್‌ನಗರ್‌ನಲ್ಲಿ ತಲಾ ಒಬ್ಬರು-ಹೀಗೆ ಒಟ್ಟು ಐದು ಮಂದಿಗೆ ಕೊರೋನ ಸೋಂಕು ತಗಲಿರುವುದು ಶುಕ್ರವಾರ ದೃಢಪಟ್ಟಿತ್ತು. ಇದರೊಂದಿಗೆ ರಾಜ್ಯದಲ್ಲಿ ಕೊರೋನೊ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿತ್ತು.