ಉ.ಪ್ರದೇಶ: ಆಸ್ತಿ ನಷ್ಟ ವಸೂಲಿಗೆ ನೂತನ ಅಧ್ಯಾದೇಶ

Update: 2020-03-14 15:14 GMT

ಲಕ್ನೋ, ಮಾ.14: ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರದಲ್ಲಿ ತೊಡಗಿಕೊಂಡಿದ್ದರು ಎಂದು ಆರೋಪಿಸಲಾಗಿರುವ ಜನರ ಭಾವಚಿತ್ರಗಳು ಮತ್ತು ವಿವರಗಳನ್ನೊಳಗೊಂಡ ಹೋರ್ಡಿಂಗ್‌ಗಳನ್ನು ತೆಗೆಯುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯದ ನಿರ್ದೇಶವನ್ನು ಪ್ರಶ್ನಿಸಿ ತಾನು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಬೆನ್ನಿಗೇ ಉತ್ತರ ಪ್ರದೇಶ ಸಂಪುಟವು ಕರಡು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ನಷ್ಟ ವಸೂಲಿ ಅಧ್ಯಾದೇಶ,2020ಕ್ಕೆ ಒಪ್ಪಿಗೆಯನ್ನು ನೀಡಿದೆ.

ಸಾರ್ವಜನಿಕ ಆಸ್ತಿಗೆ ನಷ್ಟಕ್ಕೆ ಸಂಬಂಧಿಸಿದಂತೆ ವಿವಿಧ ಅರ್ಜಿಗಳ ಕುರಿತು ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯವು ರಾಜಕೀಯ ಜಾಥಾಗಳು,ಅಕ್ರಮ ಪ್ರತಿಭಟನೆಗಳು,ಮುಷ್ಕರಗಳು ಇತ್ಯಾದಿ ಸಂದರ್ಭಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ನಷ್ಟವುಂಟಾಗುತ್ತದೆ ಮತ್ತು ಕಟ್ಟುನಿಟ್ಟಾದ ಕಾನೂನೊಂದರ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ ರಾಜ್ಯ ಸಚಿವ ಸುರೇಶ ಖನ್ನಾ ಅವರು,ಇಂತಹ ಪ್ರತಿಭಟನೆಗಳನ್ನು ವೀಡಿಯೊ ಚಿತ್ರೀಕರಿಸಬೇಕು ಮತ್ತು ನಷ್ಟ ಪರಿಹಾರಕ್ಕೆ ಅವಕಾಶವಿರಬೇಕು ಎಂದೂ ಅದು ಹೇಳಿತ್ತು ಎಂದು ತಿಳಿಸಿದರು.

 ಇಂತಹ ಪ್ರತಿಭಟನೆಗಳು ಮತ್ತು ಮುಷ್ಕರಗಳ ಸಂದರ್ಭದಲ್ಲಿ ಆಸ್ತಿ ನಷ್ಟಕ್ಕೆ ಹೇಗೆ ಪರಿಹಾರವನ್ನು ಪಾವತಿಸಬೇಕು ಎನ್ನುವುದನ್ನು ನೂತನ ಅಧ್ಯಾದೇಶವು ನಿರ್ದಿಷ್ಟ ಪಡಿಸಲಿದೆ ಎಂದೂ ಅವರು ಹೇಳಿದರು.

ಈವರೆಗೆ ನಷ್ಟ ವಸೂಲಿಗೆ ಸರಕಾರದ ಹಳೆಯ ಆದೇಶದಡಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು,ಇನ್ನು ಮುಂದೆ ಸೂಕ್ತ ಕಾನೂನಿನಡಿ ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ಇನ್ನೋರ್ವ ಸಚಿವ ಸಿದ್ಧಾರ್ಥನಾಥ ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News