×
Ad

ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಲು ಸಿದ್ಧ: ಮೋದಿ ಕರೆಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ

Update: 2020-03-14 21:57 IST

 ಇಸ್ಲಾಮಾಬಾದ್, ಮಾ. 14: ನೂತನ-ಕೊರೋನವೈರಸ್ ಒಡ್ಡಿರುವ ಸವಾಲನ್ನು ಎದುರಿಸಲು ಸಾರ್ಕ್ ದೇಶಗಳು ಒಗ್ಗೂಡಿ ಕೆಲಸ ಮಾಡಬೇಕು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಕಾಯಿಲೆಯನ್ನು ನಿಯಂತ್ರಿಸಲು ಜಾಗತಿಕ ಮತ್ತು ಪ್ರಾದೇಶಿಕ ಮಟ್ಟಗಳಲ್ಲಿ ಸಮನ್ವಯದಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದೆ.

ಕೋವಿಡ್-19 ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಚರ್ಚಿಸುವ ಪ್ರಸ್ತಾಪಿತ ವೀಡಿಯೊ ಕಾನ್ಫರೆನ್ಸ್ ಕರೆಯಲ್ಲಿ ಭಾಗವಹಿಸಲು ಪ್ರಧಾನಿ ಇಮ್ರಾನ್ ಖಾನ್‌ರ ವಿಶೇಷ ಸಹಾಯಕ (ಆರೋಗ್ಯ)ರನ್ನು ನಿಯೋಜಿಸಲಾಗಿದೆ ಎಂದು ಪಾಕಿಸ್ತಾನ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರರೊಬ್ಬರು ಶನಿವಾರ ಮುಂಜಾನೆ ಮಾಡಿದ ಟ್ವೀಟ್‌ ನಲ್ಲಿ ಹೇಳಿದ್ದಾರೆ.

‘‘ಕೊರೋನವೈರಸ್ ಬೆದರಿಕೆಗೆ ಜಾಗತಿಕ ಮತ್ತು ಪ್ರಾದೇಶಿಕ ಮಟ್ಟಗಳಲ್ಲಿ ಸಮನ್ವಯತೆಯ ಅಗತ್ಯವಿದೆ. ಈ ವಿಷಯದಲ್ಲಿ ಸಾರ್ಕ್ ಸದಸ್ಯ ದೇಶಗಳ ನಡುವೆ ನಡೆಯುವ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಪ್ರಧಾನಿಯ ವಿಶೇಷ ಸಹಾಯಕರನ್ನು ನಿಯೋಜಿಸಲಾಗುವುದು’’ ಎಂದು ಟ್ವೀಟ್ ತಿಳಿಸಿದೆ.

ತನ್ನ ನೆರೆದೇಶಗಳಿಗೆ ಸಹಾಯ ಮಾಡಲು ಪಾಕಿಸ್ತಾನ ಸಿದ್ಧವಿದೆ ಎಂಬುದಾಗಿ ವಕ್ತಾರರು ಈ ಹಿಂದೆ ಹೇಳಿದ್ದರು.

ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿರುವ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕೈಜೋಡಿಸುವಂತೆ ಪ್ರಧಾನಿ ಮೋದಿ ಶುಕ್ರವಾರ ಭಾರತದ ನೆರೆ ದೇಶಗಳನ್ನು ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News