ಮಹಾರಾಷ್ಟ್ರ: ಕೊರೊನ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆ
ಮುಂಬೈ, ಮಾ.14: ಮಹಾರಾಷ್ಟ್ರದಲ್ಲಿ ಮತ್ತೂ 9 ಮಂದಿಗೆ ಕೊರೊನ ವೈರಸ್ ಸೋಂಕು ತಗುಲಿರುವುದು ಶನಿವಾರ ದೃಢಪಡುವುದರೊಂದಿಗೆ ರಾಜ್ಯದಲ್ಲಿ ಈ ಮಾರಕ ಸೋಂಕು ತಗುಲಿರುವವರ ಸಂಖ್ಯೆ 26ಕ್ಕೇರಿದೆ. ಅಲ್ಲದೆ, ಕೇರಳವನ್ನು ಹಿಂದಿಕ್ಕಿ ದೇಶದಲ್ಲೇ ಅತ್ಯಧಿಕ ಕೊರೊನ ಸೋಂಕು ಪ್ರಕರಣ ದೃಢಪಟ್ಟಿರುವ ರಾಜ್ಯವಾಗಿ ಮಹಾರಾಷ್ಟ್ರ ಗುರುತಿಸಿಕೊಂಡಿದೆ.
ಪುಣೆಯಲ್ಲಿ 5, ಮುಂಬೈಯಲ್ಲಿ 5, ನಾಗಪುರದಲ್ಲಿ 4, ಯುವತ್ಮಾಲ್‌ನಲ್ಲಿ 2 , ನವಿ ಮುಂಬೈ, ಕಲ್ಯಾಣ್, ಥಾಣೆ, ಪನ್ವೇಲ್ ಮತ್ತು ಅಹ್ಮದನಗರದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಮುಂಬೈಯಲ್ಲಿ ಕೊರೊನ ವೈರಸ್ ಸೋಂಕು ದೃಢಪಟ್ಟಿರುವವರಲ್ಲಿ ಹೆಚ್ಚಿನವರು ಯುಎಇ, ಫ್ರಾನ್ಸ್, ಅಮೆರಿಕ ದೇಶಗಳಿಂದ ಮರಳಿ ಬಂದವರಾಗಿದ್ದು ಸರಾಸರಿ 40 ವರ್ಷದೊಳಗಿನವರು. ಈಗಾಗಲೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ರಾಜ್ಯ ಸರಕಾರ ನಿರ್ಬಂಧಿಸಿದ್ದು ರಾಜ್ಯದಾದ್ಯಂತ ಧಾರ್ಮಿಕ ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಅಲ್ಲದೆ ಮಾರ್ಚ್ ಅಂತ್ಯದವರೆಗೆ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
(ಪರೀಕ್ಷೆಗಳು ನಿಗದಿಯಾಗಿರುವ ದಿನದಂದೇ ನಡೆಯಲಿದೆ.) ಚಿತ್ರಮಂದಿರ, ಜಿಮ್, ಈಜುಕೊಳಗಳನ್ನು ಈ ತಿಂಗಳಾಂತ್ಯದವರೆಗೆ ಮುಚ್ಚುವಂತೆ ಸರಕಾರ ಸೂಚಿಸಿದೆ. ಈ ಮಧ್ಯೆ, ನಾಗಪುರ ಮೇಯೊ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು ಕೊರೊನ ವೈರಸ್ ಶಂಕಿತರು ಶುಕ್ರವಾರ ರಾತ್ರಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಅವರನ್ನು ಶನಿವಾರ ಪತ್ತೆಹಚ್ಚಿ ಮರಳಿ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.