ಚೀನಾ ಅಧ್ಯಕ್ಷರನ್ನು ‘ಕೋಡಂಗಿ’ ಎಂದಿದ್ದ ಟೀಕಾಕಾರ ನಾಪತ್ತೆ

Update: 2020-03-15 16:07 GMT

ಬೀಜಿಂಗ್, ಮಾ. 15: ಕೊರೋನವೈರಸ್ ಕಾಯಿಲೆಯ ವಿರುದ್ಧ ಹೋರಾಡಲು ಸರಕಾರ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಕಳೆದ ತಿಂಗಳು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾಡಿದ ಭಾಷಣದ ವಿಷಯದಲ್ಲಿ ಅವರನ್ನು ಟೀಕಿಸಿದ್ದ ಚೀನಾದ ಮಾಜಿ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಅವರ ಮೂವರು ಸ್ನೇಹಿತರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಓರ್ವ ಸದಸ್ಯ ಹಾಗೂ ಸರಕಾರಿ ನಿಯಂತ್ರಣದ ನಿರ್ಮಾಣ ಸಂಸ್ಥೆ ಹುವಾಯುನ್ ರಿಯಲ್ ಎಸ್ಟೇಟ್ ಗುಂಪಿನ ಮಾಜಿ ಆಡಳಿತಾಧಿಕಾರಿ ರೆನ್ ಝಿಕಿಯಾಂಗ್‌ರನ್ನು ಮಾರ್ಚ್ 12ರಿಂದ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಜಿನ್‌ಪಿಂಗ್‌ರನ್ನು ರೆನ್ ಝಿಕಿಯಾಂಗ್ ‘ಕೋಡಂಗಿ’ ಎಂಬುದಾಗಿ ಕರೆದಿದ್ದರು.

‘‘ನಮ್ಮ ಹಲವಾರು ಸ್ನೇಹಿತರು ಅವರಿಗಾಗಿ ಹುಡುಕುತ್ತಿದ್ದಾರೆ ಹಾಗೂ ಅವರು ತುಂಬಾ ಕಳವಳಗೊಂಡಿದ್ದಾರೆ’’ ಎಂದು ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯೊಂದರಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯ ಸ್ನೇಹಿತೆಯೋರ್ವರು ತಿಳಿಸಿದರು. ‘‘ರೆನ್ ಝಿಕಿಯಾಂಗ್ ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿ ಹಾಗೂ ಅವರು ನಾಪತ್ತೆಯಾಗಿರುವುದು ವ್ಯಾಪಕವಾಗಿ ಪ್ರಚಾರಗೊಂಡಿದೆ. ಇದಕ್ಕೆ ಜವಾಬ್ದಾರವಾಗಿರುವ ಸಂಸ್ಥೆಗಳು ಈ ಘಟನೆಗೆ ಸಾಧ್ಯವಾದಷ್ಟು ಬೇಗ ನ್ಯಾಯೋಚಿತ ಹಾಗೂ ಕಾನೂನುಬದ್ಧ ವಿವರಣೆಯನ್ನು ನೀಡಬೇಕು’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಾಪತ್ತೆಯಾಗಿರುವ ರೆನ್ ಝಿಕಿಯಾಂಗ್ ಬಗ್ಗೆ ವಿವರಣೆ ಕೋರಿ ಫೋನ್ ಮತ್ತು ಫ್ಯಾಕ್ಸ್ ಮೂಲಕ ‘ರಾಯ್ಟರ್ಸ್’ ಕಳುಹಿಸಿದ ಮನವಿಗಳಿಗೆ ಬೀಜಿಂಗ್ ಪೊಲೀಸರು ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News