ಚೆನ್ನೈ ತೊರೆದ ಎಂ.ಎಸ್.ಧೋನಿ

Update: 2020-03-15 17:59 GMT

ಚೆನ್ನೈ, ಮಾ.15: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಎ. 15ಕ್ಕೆ ಬಿಸಿಸಿಐ ಮುಂದೂಡಿದೆ. ಇದರಿಂದಾಗಿ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗುವ ಕನಸು ಕಾಣುತ್ತಿದ್ದ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಿರಾಸೆಯಾಗಿದೆ.

 ಕೇಂದ್ರ ಸರಕಾರ ಆದೇಶದಂತೆ ದೇಶದಲ್ಲಿ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ. ಐಪಿಎಲ್ 2020 ಟೂರ್ನಿ ಕೂಡಾ ಮಾರ್ಚ್ 29ರಂದು ಮುಂಬೈನಲ್ಲಿ ಆರಂಭವಾಗಬೇಕಿತ್ತು. ಚೆನ್ನೈನಲ್ಲಿ ತನ್ನ ತಂಡ ಚೆನ್ನೈ ಸೂಪರ್ ಕಿಂಗ್ಸ್‌ನ್ನು ಮುಂದಿನ ಐಪಿಎಲ್‌ನಲ್ಲಿ ಮುನ್ನಡೆಸಲು ತಯಾರಿ ನಡೆಸುತ್ತಿದ್ದ ಧೋನಿ ಇದೀಗ ಐಪಿಎಲ್ ಪಂದ್ಯಗಳು ಮುಂದೂಡಲ್ಪಟ್ಟ ಕಾರಣದಿಂದಾಗಿ ಚೆನ್ನೈಯಿಂದ ತವರು ರಾಂಚಿಗೆ ವಾಪಸಾಗಿದ್ದಾರೆ.

  ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವುದನ್ನು ವೀಕ್ಷಿಸಲು ಸಹಸ್ರಾರು ಅಭಿಮಾನಿಗಳು ಆಗಮಿಸಿದ್ದರು. ಅಭ್ಯಾಸದ ವೇಳೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಹತ್ತಾಕ್ಷರ ನೀಡಿ ಸೆಲ್ಫಿಗಳನ್ನು ತೆಗೆಸಿಕೊಳ್ಳುತ್ತಿದ್ದ ಧೋನಿ ಇದೀಗ ಅನಿವಾರ್ಯವಾಗಿ ತವರಿನತ್ತ ಮುಖ ಮಾಡಿದ್ದಾರೆ.

ದಿಲ್ಲಿ ಸರಕಾರ ಐಪಿಎಲ್ ಪಂದ್ಯಗಳು ಸೇರಿದಂತೆ ದಿಲ್ಲಿಯಲ್ಲಿ ನಡೆಯಬೇಕಿದ್ದ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳ ಮೇಲೆ ನಿಷೇಧ ಹೇರಿದೆ. ಇದರ ಬೆನ್ನೆಲ್ಲೆ ಬಿಸಿಸಿಐ ಸಭೆ ಸೇರಿ ಐಪಿಎಲ್‌ನ್ನು ಮುಂದೂಡುವ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರಕಾರ ಕೂಡಾ ಎ. 15ರವರೆಗೆ ವಿದೇಶಿಗರಿಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ. 2019ರ ಜುಲೈನಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಎಂ.ಎಸ್.ಧೋನಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಆ ಬಳಿಕ ತಂಡದಿಂದ ದೂರವಾಗಿದ್ದರು. 2020 ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ನೋಡುತ್ತಿದ್ದಾರೆ. ಆದರೆ ಅವರು ಭಾರತ ತಂಡದಲ್ಲಿ ಸ್ಥಾನ ಪಡೆಯಲು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಆಯ್ಕೆ ಸಮಿತಿಯು ಅವರಿಗೆ ತಂಡಕ್ಕೆ ವಾಪಸಾಗಲು ಇದೇ ಮಾನದಂಡವನ್ನು ವಿಧಿಸಿದೆ. ಒಂದು ವೇಳೆ ಐಪಿಎಲ್ ನಡೆಯದಿದ್ದರೆ 2007ರಲ್ಲಿ ಚೊಚ್ಚಲ ವಿಶ್ವಕಪ್ ಜಯಿಸಿದ್ದ ತಂಡದ ನಾಯಕ ಧೋನಿಗೆ 2020ರ ವಿಶ್ವಕಪ್‌ನಲ್ಲಿ ಆಡುವ ಅವಕಾಶದ ಹಾದಿ ಬಂದ್ ಆಗುವುದು ಬಹುತೇಕ ಖಚಿತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News