ಸಿಎಎ, ಎನ್‌ಪಿಆರ್,ಎನ್‌ಆರ್‌ಸಿ ವಿರುದ್ಧ ನಿರ್ಣಯ ಅಂಗೀಕರಿಸಿದ ತೆಲಂಗಾಣ ವಿಧಾನಸಭೆ

Update: 2020-03-16 17:11 GMT

ಹೊಸದಿಲ್ಲಿ,ಮಾ.16: ಪೌರತ್ವ ತಿದ್ದುಪಡಿ ಕಾಯ್ದೆ, ಪ್ರಸ್ತಾವಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರೋಧಿಸಿ ತೆಲಂಗಾಣ ವಿಧಾನಸಭೆ ಸೋಮವಾರ ನಿರ್ಣಯವೊಂದನ್ನು ಅಂಗೀಕರಿಸಿದೆ.

ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನಿರ್ಣಯವನ್ನು ಸದನದಲ್ಲಿ ಮಂಡಿಸಿ ಮಾತನಾಡುತ್ತಾ, ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಪ್ರಕ್ರಿಯೆಗಳು ದೊಡ್ಡ ಸಂಖ್ಯೆಯ ಜನರನ್ನು ಪೌರತ್ವದ ವ್ಯಾಪ್ತಿಯಿಂದ  ಹೊರಗಿಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿರುವ ಯಾವುದೇ ಧರ್ಮ ಅಥವಾ ಯಾವುದೇ ವಿದೇಶಿ ರಾಷ್ಟ್ರ ಕುರಿತಾದ ಪ್ರಸ್ತಾವನೆಗಳನ್ನು ಕೈಬಿಡಬೇಕೆಂದು ನಿರ್ಣಯಕ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ತೆಲಂಗಾಣ ವಿಧಾನಸಭೆಯ ಸದಸ್ಯರು ತಿಳಿಸಿದರು. ಸಮಾನತೆ, ತಾರತಮ್ಯರಹಿತತೆ ಹಾಗೂ ಜಾತ್ಯತೀತತೆಯ ಸಿದ್ಧಾಂತಗಳನ್ನು ಉಲ್ಲಂಘಿಸುವುದರ ಜೊತೆಗೆ, ಪೌರತ್ವದ ಕುರಿತ ದಾಖಲೆಗಳನ್ನು ಹೊಂದಿರದ ದುರ್ಬಲ ಸಮುದಾಯಗಳ ಬದುಕನ್ನು ಅಪಾಯಕ್ಕೊಡ್ಡಲಿದೆ’’ ಎಂದವರು ತಿಳಿಸಿದರು.

ಇದಕ್ಕಿಂತಲೂ ಹೆಚ್ಚಾಗಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ಗಳ ಕಾನೂನು ಸಿಂಧುತ್ವ ಹಾಗೂ ಸಾಂವಿಧಾನಿಕತೆಯ ಬಗೆಗೂ ಗಂಭೀರವಾದ ಪ್ರಶ್ನೆಗಳನ್ನು ಮೂಡಿಸಿದೆ ’’ ಎಂದರು. ಓರ್ವನ ಪೌರತ್ವವನ್ನು ನಿರ್ಧರಿಸಲು ಆತನ ಧರ್ಮವನ್ನು ಮಾನದಂಡವಾಗಿ ಬಳಸಿಕೊಂಡಿರುವುದು ಇದೇ ಮೊದಲು ಎಂದವರು ಕಳವಳ ವ್ಯಕ್ತಪಡಿಸಿದರು. ಎನ್‌ಪಿಆರ್-ಎನ್‌ಆರ್‌ಸಿ ಪ್ರಕ್ರಿಯೆಯಿಂದ ರಾಜ್ಯದ ಎಲ್ಲಾ ಜನರನ್ನು ರಕ್ಷಿಸುವುದಕ್ಕೆ ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ಣಯವು ತೆಲಂಗಾಣ ಸರಕಾರವನ್ನು ಆಗ್ರಹಿಸಿದೆ. ಜಾತ್ಯತೀತತೆಯನ್ನು ಹಾಗೂ ಸಮಾನತೆಯನ್ನು ತ್ಯಜಿಸುವ ಮೂಲಕ ಪುರೋಹಿತಶಾಹಿ ವ್ಯವಸ್ಥೆಯನ್ನು ಸಾಂಸ್ಥೀಕರಿಸಲಾಗುತ್ತದೆ’’ ಎಂದು ನಿರ್ಣಯ ಹೇಳಿದೆ.

ತೆಲಂಗಾಣವು ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ಐದನೆ ರಾಜ್ಯವಾಗಿದೆ. ಈ ಮೊದಲು ಕೇರಳ, ಪಂಜಾಬ್, ಪ.ಬಂಗಾಳ ಹಾಗೂ ರಾಜಸ್ತಾನ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News