ಒಮಾನ್ ಓಪನ್ ಪ್ರಶಸ್ತಿ ಬಾಚಿಕೊಂಡ ಶರತ್ ಕಮಲ್

Update: 2020-03-16 18:10 GMT

ಮಸ್ಕತ್, ಮಾ.16: ಭಾರತದ ಹಿರಿಯ ಟೇಬಲ್ ಟೆನಿಸ್ ತಾರೆ ಶರತ್ ಕಮಲ್ ಅಮೋಘ ಪ್ರದರ್ಶನ ನೀಡಿ ಐಟಿಟಿಎಫ್ ಚಾಲೆಂಜರ್ ಒಮಾನ್ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ.

ರವಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಕಮಲ್ ಅಗ್ರ ಶ್ರೇಯಾಂಕದ ಪೋರ್ಚುಗಲ್‌ನ ಮಾರ್ಕೊಸ್ ಫ್ರೆಟಾಸ್‌ರನ್ನು 6-11, 11-8, 12-10, 11-9, 3-11, 17-15 ಅಂತರದಿಂದ ಮಣಿಸಿದರು.

ಒಮಾನ್ ಓಪನ್ ಪ್ರಶಸ್ತಿ ಜಯಿಸುವುದ ರೊಂದಿಗೆ 37ರ ಹರೆಯದ ಶರತ್ ದಶಕದ ಬಳಿಕ ಐಟಿಟಿಎಫ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಶರತ್ 2010ರಲ್ಲಿ ಈಜಿಪ್ಟ್ ಓಪನ್‌ನಲ್ಲಿ ಕೊನೆಯ ಬಾರಿ ಐಟಿಟಿಎಫ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಆ ಬಳಿಕ ಎರಡು ಬಾರಿ ಸೆಮಿ ಫೈನಲ್‌ನಲ್ಲಿ(2011ರಲ್ಲಿ ಮೊರಾಕ್ಕೊ ಹಾಗೂ 2017ರಲ್ಲಿ ಇಂಡಿಯಾ ಓಪನ್)ಕಾಣಿಸಿಕೊಂಡಿದ್ದರು. ಆದರೆ ಅವರಿಗೆ ಟ್ರೋಫಿ ಕೈಗೆಟುಕಿರಲಿಲ್ಲ.

 ಇದಕ್ಕೂ ಮೊದಲು ನಡೆದ ಸೆಮಿ ಫೈನಲ್‌ನಲ್ಲಿ ಶರತ್ ರಶ್ಯದ ಕಿರಿಲ್ ಸ್ಕಚ್ಕೋವಾರನ್ನು ಸೋಲಿಸಿದರು. ನಾಲ್ಕನೇ ಶ್ರೇಯಾಂಕದ ಶರತ್ ಒಂದು ಗಂಟೆ ಹಾಗೂ 8 ನಿಮಿಷಗಳ ಕಾಲ ನಡೆದ ಏಳು ಸೆಟ್‌ಗಳ ಸೆಮಿ ಫೈನಲ್‌ನಲ್ಲಿ 11-13, 11-13, 13-11, 11-9, 13-11, 8-11, 11-7 ಸೆಟ್‌ಗಳಿಂದ ಜಯ ಸಾಧಿಸಿದರು. ಮೊರ್ಕೊಸ್ ಸೆಮಿ ಫೈನಲ್‌ನಲ್ಲಿ ಭಾರತದ ಹರ್ಮೀತ್ ದೇಸಾಯಿ ಅವರನ್ನು 5-11, 11-9, 6-11, 6-11, 11-8, 13-11, 11-3 ಸೆಟ್‌ಗಳ ಅಂತರದಿಂದ ಸೋಲಿಸಿದರು.

ಭಾರತದ ದೇಸಾಯಿ ಪಂದ್ಯದ ಆರಂಭಿಕ ಹಂತದಲ್ಲಿ ಪ್ರಾಬಲ್ಯ ಸಾಧಿಸಿದರು.ವಿಶ್ವದ ನಂ.26ನೇ ಆಟಗಾರ ಫ್ರೆಟಾಸ್ ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಫೈನಲ್ ಹಾದಿ ಸುಗಮಗೊಳಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News