ಕೊರೋನವೈರಸ್: ಕೇರಳದಲ್ಲಿ ಪಾಸಿಟಿವ್ ಪ್ರಕರಣಗಳ ಸರಣಿಗೆ ಬ್ರೇಕ್ ಹಾಕಿದ ಮಂಗಳವಾರ

Update: 2020-03-17 18:12 GMT

ತಿರುವನಂತಪುರ,ಮಾ.17: ಕೇರಳದಲ್ಲಿ ಪಾಸಿಟಿವ್ ಕರೋನವೈರಸ್ ಪ್ರಕರಣಗಳ ಸರಣಿಗೆ ಮಂಗಳವಾರ ಬ್ರೇಕ್ ಬಿದ್ದಿದೆ. ಕಳೆದೆರಡು ದಿನ ತಲಾ ಮೂರು ಕೊರೋನವೈರಸ್ ಪ್ರಕರಣಗಳು ದೃಢಪಟ್ಟ ಬಳಿಕ ಮಂಗಳವಾರ ಒಂದೂ ಪ್ರಕರಣ ದೃಢಪಟ್ಟಿಲ್ಲ. ಇಟಲಿಯಿಂದ ಮರಳಿದ ಬಳಿಕ ಕೊರೋನವೈರಸ್ ಸೋಂಕಿನಿಂದಾಗಿ ಕಳಮಶ್ಶೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿರುವ ಮೂರರ ಹರೆಯದ ಮಗುವೂ ಅಪಾಯದಿಂದ ಪಾರಾಗಿದೆ ಎನ್ನಲಾಗಿದೆ.

ಇದು ಭಾರತದ ಇತರ ಭಾಗಗಳು ಸೇರಿದಂತೆ ಇಡೀ ವಿಶ್ವದಲ್ಲಿ ಅಗತ್ಯ ಚಟುವಟಿಕೆಗಳೂ ಸ್ತಬ್ಧಗೊಂಡಿರುವಾಗ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಭಿನ್ನ ಸಂದೇಶವನ್ನು ನೀಡಲು ಪ್ರೇರೇಪಿಸಿರುವಂತಿದೆ. ಮಂಗಳವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸೋಂಕಿನಿಂದ ಪಾರಾಗಲು ನಾವು ಎಚ್ಚರಿಕೆಯಿಂದ ಇರಬೇಕು ನಿಜ,ಆದರೆ ನಮ್ಮ ಸಾಮಾಜಿಕ ಜೀವನವೂ ಮಾಮೂಲಿಯಾಗಿ ಸಾಗಬೇಕು ’ಎಂದರು.

ಸದ್ಯ ಕೇರಳದಲ್ಲಿ 19 ಸೋಂಕುಪೀಡಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಕೊರೋನವೈರಸ್ ಸೋಂಕು ದೃಢಪಟ್ಟಿದ್ದ ಕೇರಳದ ಮೂವರು ಚೇತರಿಸಿಕೊಂಡು ಕಳೆದ ತಿಂಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News