ಆದಿತ್ಯನಾಥ್ 'ಉಗ್ರವಾದಿ' ಎಂದ ವಕೀಲನ ವಿರುದ್ಧ ದೇಶದ್ರೋಹ ಪ್ರಕರಣ, ಬಂಧನ
ಕಾನ್ಪುರ್: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ವೀಡಿಯೋ ಒಂದನ್ನು ರಿಟ್ವೀಟ್ ಮಾಡಿ ಅವರನ್ನು ಉಗ್ರವಾದಿ ಎಂದು ಬಣ್ಣಿಸಿದ ಕಾನ್ಪುರ್ ವಕೀಲ ಅಬ್ದುಲ್ ಹನ್ನನ್ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಸಿಎಎ ಹಾಗೂ ಎನ್‍ಆರ್ ಸಿ ವಿರುದ್ಧ ಪ್ರತಿಭಟಿಸಿದವರ ಮೇಲೆ ಲಾಠಿಚಾರ್ಜ್ ನಡೆಸಿದ ಕ್ರಮವನ್ನು ಸಮರ್ಥಿಸಿ ಮುಖ್ಯಮಂತ್ರಿ ಆದಿತ್ಯನಾಥ್ ನೀಡಿದ್ದ ಭಾಷಣವೊಂದರ ವೀಡಿಯೋವನ್ನು ಶನಿವಾರ ರಾಜ್ಯ ಮಾಹಿತಿ ಇಲಾಖೆಯ ಮಾಧ್ಯಮ ಸಲಹೆಗಾರ ಶಲಭ್ ಮಣಿ ತ್ರಿಪಾಠಿ ಅವರು ಪೋಸ್ಟ್ ಮಾಡಿ ಹೀಗೆಂದು ಬರೆದಿದ್ದರು- "ತುಮ್ ಕಾಗಜ್ ನಹೀ ದಿಖಾವೋಗೆ, ಔರ್ ದಂಗಾ ಭೀ ಫೈಲಾವೋಗೆ, ತೋ ಹಮ್ ಲಾಠೀ ಭೀ ಚಲ್ವಾಯೇಂಗೆ, ಘರ್‍ಬಾರ್ ಭೀ ಭಿಕ್ವಾಯೇಂಗೆ ಔರ್ ಹಾಂ ಪೋಸ್ಟರ್ ಭೀ ಲಗ್ವಾಯೇಂಗೆ (ನೀವು ದಾಖಲೆ ತೋರಿಸುವುದಿಲ್ಲ, ದಂಗೆಗಳಲ್ಲೂ ಭಾಗವಹಿಸುತ್ತೀರಿ, ನಂತರ ನಾವು ಲಾಠಿ ಚಾರ್ಜ್ ಮಾಡುತ್ತೇವೆ ನಿಮ್ಮ ಮನೆಗಳನ್ನು ಹರಾಜು ಹಾಕುತ್ತೇವೆ ಹಾಗೂ ಪೋಸ್ಟರುಗಳನ್ನು ಹಾಕುತ್ತೇವೆ).
ಇದನ್ನು ರಿಟ್ವೀಟ್ ಮಾಡಿದ್ದ ಹನ್ನನ್ ಜತೆಗೆ ಆದಿತ್ಯನಾಥ್ ಆವರನ್ನು 'ಉಗ್ರವಾದಿ' ಎಂದು ಬಣ್ಣಿಸಿದ್ದರು.
ಪ್ರತಿಭಟನಾಕಾರರಿಗೆ ಉಚಿತ ಕಾನೂನು ನೆರವು ನೀಡುವುದಾಗಿ ಹಾಗೂ ಎಲ್ಲಾ ಸಂವಿಧಾನ ಪ್ರಿಯರು ತಮ್ಮನ್ನು ಫಾಲೋ ಮಾಡಿ ತಮ್ಮ ಟ್ವೀಟ್ ಶೇರ್ ಮಾಡಬೇಕೆಂದು ಹೇಳಿ ಹನ್ನನ್ ಇನ್ನೊಂದು ಟ್ವೀಟ್ ಮಾಡಿದ್ದರು.
ಹನ್ನನ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.