×
Ad

"ಯುದ್ಧಕ್ಕೆ ಸನ್ನದ್ಧರಾಗಿ": ಯೋಧನಿಗೆ ಕೊರೋನಾವೈರಸ್ ಸೋಂಕು ದೃಢಪಟ್ಟ ಬಳಿಕ ಅರೆಸೇನಾಪಡೆಗಳಿಗೆ ಕರೆ

Update: 2020-03-18 18:06 IST

ಹೊಸದಿಲ್ಲಿ: ಭಾರತೀಯ ಸೇನೆಯ ಒಬ್ಬ ಜವಾನನಿಗೆ ಕೊರೋನಾವೈರಸ್ ಸೋಂಕು ದೃಢ ಪಟ್ಟ ಕೆಲವೇ ಗಂಟೆಗಳಲ್ಲಿ  ಕೇಂದ್ರ ಸರಕಾರ ಅರೆಸೇನಾಪಡೆಗಳಿಗೆ ಕೊರೋನಾ ವಿರುದ್ಧದ "ಯುದ್ಧಕ್ಕೆ ಸನ್ನದ್ಧ"ರಾಗಿರುವಂತೆ ಕರೆ ನೀಡಿದೆ. ಈ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಸೈನಿಕರ ಪಾತ್ರ ಹಾಗೂ ಜವಾಬ್ದಾರಿಗಳ ಕುರಿತ ಮಾಹಿತಿಯಿರುವ ಸುತ್ತೋಲೆಯನ್ನು ಸರಕಾರ ಬಿಡುಗಡೆಗೊಳಿಸಿದೆ.

ಸ್ನೋ ವಾರಿಯರ್ಸ್ ಎಂಬ ಲಡಾಖ್ ಸ್ಕೌಟ್ಸ್‍ನ ಇನ್‍ಫೆಂಟ್ರಿ ರೆಜಿಮೆಂಟ್‍ನ 34 ವರ್ಷದ ಸೈನಿಕ ಕೊರೋನಾವೈರಸ್ ಸೋಂಕಿಗೊಳಗಾಗಿದ್ದು ಇದು ಭಾರತೀಯ ಸೇನೆಯಲ್ಲಿನ ಮೊದಲ ಕೊರೋನಾ ಪ್ರಕರಣವಾಗಿದೆ. ಇದು ಬೆಳಕಿಗೆ ಬರುತ್ತಿದ್ದಂತೆಯೇ  ಸುಮಾರು 800 ಸೈನಿಕರನ್ನು ಲೇಹ್‍ನಲ್ಲಿರುವ ಲಡಾಖ್ ಸ್ಕೌಟ್ಸ್ ರೆಜಿಮೆಂಟಲ್ ಸೆಂಟರ್‍ನಲ್ಲಿ  ದಿಗ್ಬಂಧನದಲ್ಲಿರಿಸಲಾಗಿದೆ.

"ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಭಾರತಕ್ಕೆ ಈ ಕೊರೋನವೈರಸ್ ಎದುರಿಸಲು ಅಂದಾಜು 50 ದಿನಗಳನ್ನು ನೀಡಿದೆ. ಕಮ್ಯುನಿಟಿ ಟ್ರಾನ್ಸ್‍ಮಿಶನ್ ಅಥವಾ ಸಮುದಾಯದಲ್ಲಿ ಈ ರೋಗ ಹರಡದೇ ಇದ್ದಲ್ಲಿ ಮಾತ್ರ ಇದರ  ಹರಡುವಿಕೆಯನ್ನು ಭಾರತ ತಡೆಗಟ್ಟಬಹುದಾಗಿದೆ,'' ಎಂದು ಎಡಿಜಿ (ವೈದ್ಯಕೀಯ) ಡಾ. ಮುಕೇಶ್ ಸಕ್ಸೇನಾ ಅವರ  ಸೂಚನೆ ತಿಳಿಸಿದೆ.

"ಸೋಶಿಯಲ್ ಡಿಸ್ಟೆನ್ಸಿಂಗ್- ಸಾರ್ವಜನಿಕವಾಗಿ ಇಬ್ಬರು ವ್ಯಕ್ತಿಗಳ ನಡುವೆ ಕನಿಷ್ಠ ಒಂದು ಮೀಟರ್ ಅಂತರ ಕಾಪಾಡಿಕೊಳ್ಳುವುದು ಹಾಗೂ ಆರೋಗ್ಯ ಸೇವಾ ಕ್ಷೇತ್ರದ ಸಿಬ್ಬಂದಿಗೆ ಸೂಕ್ತ ಸುರಕ್ಷತೆಯನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದ್ದು, ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ,'' ಎಂದು ನಾಲ್ಕು ಪುಟಗಳ ಸುತ್ತೋಲೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News