ಕೊರೋನವೈರಸ್ ಸೋಂಕನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಮೊರೆಹೋದ ಸೇನೆ
ಹೊಸದಿಲ್ಲಿ,ಮಾ.18: ತನ್ನ ಪಡೆಗಳಲ್ಲಿ ಕೊರೋನವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಭಾರತೀಯ ಸೇನೆಯು ರಜೆಯಿಂದ ವಾಪಸಾಗುವ ಯೋಧರ ವೈದ್ಯಕೀಯ ತಪಾಸಣೆಯಿಂದ ಹಿಡಿದು ಅನಗತ್ಯ ಪ್ರಯಾಣ ಮತ್ತು ಸಮಾವೇಶಗಳ ರದ್ದತಿಯವರೆಗೆ ಸರಣಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಸರ್ವಿಸ್ ಸಿಲೆಕ್ಷನ್ ಬೋರ್ಡ್ ಪರೀಕ್ಷೆಗಳು ಸೇರಿದಂತೆ ದೇಶಾದ್ಯಂತ ಸೇನಾ ಭರ್ತಿ ಕಾರ್ಯಕ್ರಮಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ಇಲ್ಲಿ ತಿಳಿಸಿದರು.
ಕೆಲವು ಸ್ಥಳಗಳಲ್ಲಿ ರಜೆಯಿಂದ ವಾಪಸಾಗಿರುವ ಯೋಧರನ್ನು ಪ್ರತ್ಯೇಕ ನಿಗಾದಡಿ ಇರಿಸಲಾಗಿದೆ. ಇತರ ಕಡೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಯೋಧರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅನಗತ್ಯ ಪ್ರಯಾಣವನ್ನು ಕೈಗೊಳ್ಳದಂತೆ ಸೇನೆಯು ತನ್ನ ಸಿಬ್ಬಂದಿಗಳಿಗೆ ಸೂಚಿಸಿದೆ ಎಂದರು.
ಭಾರತೀಯ ವಾಯುಪಡೆಯೂ ಈ ವಾರದ ಉತ್ತರಾರ್ಧದಲ್ಲಿ ನಡೆಯಬೇಕಿದ್ದ ಐಎಎಫ್ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ಪ್ರಕಟಿಸಿದೆ.
ಲೇಹ್‌ನಲ್ಲಿ ಲಡಾಖ್ ಸ್ಕೌಟ್ ರೆಜಿಮೆಂಟ್‌ನ 34ರ ಹರೆಯದ ಯೋಧನಲ್ಲಿ ಕೊರೋನವೈರಸ್ ಸೋಂಕು ಪತ್ತೆಯಾಗಿದ್ದು,ಇದು ಭಾರತೀಯ ಸೇನೆಯಲ್ಲಿ ಮೊದಲ ಪ್ರಕರಣವಾಗಿದೆ ಎಂದು ಸೇನಾ ಮೂಲಗಳು ಬುಧವಾರ ತಿಳಿಸಿವೆ.