×
Ad

ಸಿಂಗಾಪುರಕ್ಕೆ ತೆರಳಿದ ದಿಲ್ಲಿಯ ಕೊರೋನ ವೈರಸ್ ಸೋಂಕಿತ

Update: 2020-03-18 22:31 IST

ಹೊಸದಿಲ್ಲಿ, ಮಾ. 18: ಡಾ. ರಾಮಮನೋಹರ್ ಲೋಹಿಯಾ ಆಸ್ಪತ್ರೆಗೆ ಗಂಟಲು ದ್ರವದ ಮಾದರಿ ನೀಡಿದ ದಿಲ್ಲಿಯ ಸಾಕೇತ್‌ನ 44 ವರ್ಷದ ವ್ಯಕ್ತಿ ಸಿಂಗಾಪುರಕ್ಕೆ ಹಿಂದಿರುಗಿದ್ದಾರೆ. ಅವರ ವರದಿ ಮಂಗಳವಾರ ಬಂದಿದ್ದು, ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಈ ವ್ಯಕ್ತಿ ಈಗಾಗಲೇ ಸಿಂಗಾಪುರಕ್ಕೆ ತೆರಳಿದ್ದಾರೆ. ಅವರು ಸಿಂಗಾಪುರ ಹಾಗೂ ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರು ಕಳೆದ ತಿಂಗಳು ಕೆನಡಕ್ಕೆ ಕೂಡ ಪ್ರಯಾಣ ಬೆಳೆಸಿದ್ದರು. ಅವರ ಹೆತ್ತವರು ಸಾಕೇತ್‌ನಲ್ಲಿರುವ ಅವರ ಮನೆಯಲ್ಲಿ ಇದ್ದಾರೆ. ಅವರ ಗಂಟಲು ದ್ರವದ ಮಾದರಿಗಳನ್ನು ಕೂಡ ಸಂಗ್ರಹಿಸಲಾಗಿದೆ. ಮನೆ ಕೆಲಸದಾಕೆ ಹಾಗೂ ಚಾಲಕ ಸೇರಿದಂತೆ ಆ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಇತರ 8 ಮಂದಿಯ ಬಗ್ಗೆ ನಾವು ನಿಗಾ ಇರಿಸಿದ್ದೇವೆ ಎಂದು ದಿಲ್ಲಿ ಸರಕಾರದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನ ವೈರಸ್ ಸೋಂಕು ಹರಡಿರುವ ಎರಡು ದೇಶಗಳಿಗೆ ಅವರು ಪ್ರಯಾಣ ಬೆಳಸಿದ್ದರು. ಪರಿಣಾಮ ಅವರಲ್ಲಿ ಕೊರೋನ ವೈರಸ್ ಸೋಂಕಿನ ಕೆಲವು ಲಕ್ಷಣಗಳು ಕಾಣಿಸಿಕೊಂಡಿದ್ದವು. ಅವರು ಮಾದರಿ ಸಂಗ್ರಹ ಕೇಂದ್ರದಲ್ಲಿ ಗಂಟಲು ದ್ರವದ ಮಾದರಿ ನೀಡುವಂತೆ ಹೆಲ್ಪ್‌ಲೈನ್ ಮೂಲಕ ಸಲಹೆ ನೀಡಿದೆವು ಎಂದು ಆರೋಗ್ಯ ಇಲಾಖೆಯ ಇನ್ನೊಬ್ಬರು ಅಧಿಕಾರಿ ತಿಳಿಸಿದ್ದಾರೆ. ಕೊರೋನ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೊರೋನ ವೈರಸ್ ಸೋಂಕಿನ ಲಕ್ಷಣ ಹೊಂದಿರುವವರ ಮೇಲೆ ಕಣ್ಣಿರಿಸಿದೆ. ಡಾ. ರಾಮ್‌ಮನೋಹರ್ ಲೋಹಿಯಾ ಹಾಗೂ ಸಫ್ದರ್ ಜಂಗ್ ಆಸ್ಪತ್ರೆಯ ಪ್ರತ್ಯೇಕ ವಿಭಾಗದಲ್ಲಿ 250 ಮಂದಿಯನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News