100 ಮಂದಿಯ ಕೋವಿಡ್ ಟೆಸ್ಟ್ ಫಲಿತಾಂಶದ ನಿರೀಕ್ಷೆಯಲ್ಲಿ ಪಿಸಿಬಿ

Update: 2020-03-18 17:26 GMT

ಕರಾಚಿ, ಮಾ.18: ರದ್ದುಗೊಂಡಿರುವ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ(ಪಿಎಸ್‌ಎಲ್) ಭಾಗಿಯಾಗಿದ್ದ ಆಟಗಾರರು ಸೇರಿದಂತೆ 100 ಮಂದಿಯ ಕೋವಿಡ್-19 ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಬುಧವಾರ ತಿಳಿಸಿದೆ.

 ವಿದೇಶಿ ಆಟಗಾರನಲ್ಲಿ ಕೊರೋನ ವೈರಸ್ ಸೋಂಕಿನ ಲಕ್ಷಣ ಕಾಣಿಸಿದೆ ಎಂದು ಕ್ರಿಕೆಟ್ ಮಂಡಳಿ ಬಹಿರಂಗಪಡಿಸಿದ ಬೆನ್ನಲ್ಲೇ ಪಿಎಸ್‌ಎಲ್ ಟೂರ್ನಿಯನ್ನು ಮಂಗಳವಾರ ರದ್ದುಪಡಿಸ ಲಾಗಿತ್ತು. ಇಂಗ್ಲೆಂಡ್‌ನ ಕ್ರಿಕೆಟಿಗ ಅಲೆಕ್ಸ್ ಹೇಲ್ಸ್ ಗೆ ಕೊರೋನ ವೈರಸ್ ಲಕ್ಷಣ ಕಾಣಿಸಿಕೊಂಡಿದೆ ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವೀಕ್ಷಕ ವಿವರಣೆಗಾರ ರಮೀಝ್ ರಾಝಾ ಬಹಿರಂಗಪಡಿಸಿದ್ದಾರೆ.

ಸ್ವದೇಶಕ್ಕೆ ವಾಪಸಾದ ಬಳಿಕ ನನಗೆ ಜ್ವರ ಹಾಗೂ ಒಣ ಕೆಮ್ಮು ಕಾಣಿಸಿಕೊಂಡಿದ್ದು, ಸ್ವತಃ ಪ್ರತ್ಯೇಕವಾಗಿ ದ್ದೇನೆ ಎಂದು ಹೇಲ್ಸ್ ಪ್ರತಿಕ್ರಿಯೆ ನೀಡಿದ್ದಾರೆ.

 ನಾವು ಸುಮಾರು 100 ಮಂದಿಯ ಕೊರೋನ ವೈರಸ್ ಪರೀಕ್ಷೆಯ ಫಲಿತಾಂಶವನ್ನು ಇಂದು ರಾತ್ರಿ ಅಥವಾ ನಾಳೆ ಬರುವ ನಿರೀಕ್ಷೆಯಲ್ಲಿದ್ದೇವೆ. ಈ ತನಕ ಪರೀಕ್ಷೆಯ ಫಲಿತಾಂಶ ಬಂದಿಲ್ಲ. ಸೆಮಿ ಫೈನಲ್ ತಂಡಗಳ ಆಟಗಾರರು ಹಾಗೂ ಅಧಿಕಾರಿಗಳು, ಅಂಪೈರ್‌ಗಳು, ವೀಕ್ಷಕವಿವರಣೆಗಾರರು ಹಾಗೂ ಪಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸದಸ್ಯರುಗಳ ಆರೋಗ್ಯ ಹಾಗೂ ಸುರಕ್ಷತೆಯನ್ನು ಖಚಿತಪಡಿಸಲು ನಾವು ಎಲ್ಲ ರೀತಿಯ ಮುನ್ನೆಚ್ಚರಿಕಾ ಹೆಜ್ಜೆ ಇಟ್ಟಿದ್ದೇವೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ಲಾಹೋರ್ ಹಾಗೂ ಕರಾಚಿಯಲ್ಲಿರುವ ತನ್ನ ಕಚೇರಿಗಳನ್ನು ಸೋಮವಾರದ ತನಕ ಬಂದ್ ಮಾಡಲಾಗುವುದು ಹಾಗೂ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಿಸಿಬಿ ಘೋಷಿಸಿದೆ.

 ಪಾಕಿಸ್ತಾನ ಸೂಪರ್ ಲೀಗ್‌ನ್ನು ಮುಂದೂಡದೇ ಇರುವುದಕ್ಕೆ ಪಿಸಿಬಿ ತೀವ್ರ ಟೀಕೆಗೆ ಗುರಿಯಾಗಿತ್ತು. ‘‘ಸರಕಾರ ಹಾಗೂ ಆರೋಗ್ಯ ಏಜೆನ್ಸಿಗಳನ್ನು ಸಂಪರ್ಕಿಸಿದ ಬಳಿಕ ನಾವು ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಕಳೆದ ವಾರ ಸ್ವದೇಶಕ್ಕೆ ವಾಪಸಾಗಿದ್ದ ಇಂಗ್ಲೆಂಡ್ ಕ್ರಿಕೆಟಿಗ ಹೇಲ್ಸ್ ಸಂದೇಶವನ್ನು ನೋಡಿದ ತಕ್ಷಣ ನಾವು ಪ್ರಾಮಾಣಿಕ ಕ್ರಮ ಕೈಗೊಂಡಿದ್ದು, ಎಲ್ಲರ ಸುರಕ್ಷತೆಗಾಗಿ ಎಲ್ಲ ರೀತಿಯ ಶಿಷ್ಟಾಚಾರವನ್ನು ಅನುಸರಿಸಿದ್ದೇವೆ’’ ಎಂದು ಪಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪಿಸಿಬಿಯು ಕನಿಷ್ಠ ನಾಲ್ಕು ಪಿಎಸ್‌ಎಲ್ ಪಂದ್ಯಗಳನ್ನು ಕರಾಚಿಯ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರೇಕ್ಷಕರಿಲ್ಲದೆ ನಡೆಸಿದ್ದು, ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯವನ್ನು ಇದೇ ರೀತಿ ಆಯೋಜಿಸಲು ಯೋಜನೆ ರೂಪಿಸಿದೆ. ಇದರಿಂದ ಎಷ್ಟು ಆದಾಯ ನಷ್ಟವಾಗಲಿದೆ ಎಂದು ಇನ್ನಷ್ಟೇ ಅಂದಾಜಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News