×
Ad

ದೇಶವ್ಯಾಪಿ ಎನ್‍ಆರ್ ಸಿ ಅಗತ್ಯ ಎಂದು ಸುಪ್ರೀಂ ಕೋರ್ಟಿನಲ್ಲಿ ಹೇಳಿದ ಕೇಂದ್ರ ಸರಕಾರ

Update: 2020-03-19 14:39 IST

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅಪೀಲುಗಳಿಗೆ ಪ್ರತಿ ಅಫಿದಾವಿತ್ ಅನ್ನು ಸುಪ್ರೀಂ ಕೋರ್ಟಿನಲ್ಲಿ  ಸಲ್ಲಿಸಿರುವ ಕೇಂದ್ರ ಸರಕಾರ  'ಯಾವುದೇ ಸಾರ್ವಭೌಮ ರಾಷ್ಟ್ರಕ್ಕೆ ಎನ್‍ಆರ್ ಸಿ ಅಗತ್ಯ ಹಾಗೂ ಈ ಪ್ರಕ್ರಿಯೆ ದೇಶದ ನಾಗರಿಕರು ಹಾಗೂ ನಾಗರಿಕರಲ್ಲದೇ ಇರುವವರನ್ನು ಗುರುತಿಸಲು ಅಗತ್ಯ' ಎಂದು ಹೇಳಿದೆ. ಡಿಸೆಂಬರ್ 2004ರಿಂದ ಎನ್‍ಆರ್ ಸಿ ಪೌರತ್ವ ಕಾಯಿದೆ 1955 ಇದರ ಭಾಗವಾಗಿದೆ ಎಂದು ಹೇಳಿಕೊಂಡಿದೆ.

ದೇಶವ್ಯಾಪಿ ಎನ್‍ಆರ್ ಸಿ ಬಿಜೆಪಿಯ 2019 ಚುನಾವಣಾ ಪ್ರಣಾಳಿಕೆಯ ಭಾಗವಾಗಿದ್ದರೂ  ಮೋದಿ ಸರಕಾರ ಇದರ ವಿರುದ್ಧ ಕೇಳಿ ಬಂದ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ತನ್ನ ವರಸೆ ಬದಲಾಯಿಸಿತ್ತು.

"ರಾಷ್ಟ್ರವ್ಯಾಪಿ ಎನ್‍ಆರ್ ಸಿಯ ಚರ್ಚೆ ಈಗ ಅಗತ್ಯವಿಲ್ಲ, ಅದರ ಬಗ್ಗೆ ಸಚಿವ ಸಂಪುಟ ಯಾ ಸಂಸತ್ತಿನಲ್ಲಿ ಚರ್ಚೆ ನಡೆದಿಲ್ಲ'' ಎಂದು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿದ್ದರು. ಇದಕ್ಕಿಂತ ಮೊದಲು ಸಾರ್ವಜನಿಕ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ``ದೇಶವ್ಯಾಪಿ ಎನ್‍ಆರ್ ಸಿ ಕುರಿತು ಚರ್ಚೆಯೇ ನಡೆದಿಲ್ಲ'' ಎಂದು ವಾದಿಸಿದ್ದರು.

ಹೀಗಿರುವಾಗ ಎನ್‍ಆರ್ ಸಿ ಅಗತ್ಯ ಎಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿದಾವಿತ್ ನಲ್ಲಿ ಹೇಳುವ ಮೂಲಕ ಕೇಂದ್ರ ಸರಕಾರ ಯು-ಟರ್ನ್ ಹೊಡೆದಿದೆ ಎಂದೇ ಹೇಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News