ರಾಜ್ಯಸಭೆಗೆ ಮಾಜಿ ಸಿಜೆಐ ಗೊಗೊಯಿ ನಾಮಕರಣ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ

Update: 2020-03-19 11:07 GMT

ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ರಾಜ್ಯಸಭೆಗೆ ನಾಮಕರಣಗೊಳಿಸಿದ ಸರಕಾರದ ಕ್ರಮವನ್ನು ಪ್ರಶ್ನಿಸಿ ಮೋದಿ ಕಟ್ಟಾ ಅಭಿಮಾನಿ ಮಧು ಪೂರ್ಣಿಮಾ ಕೀಶ್ವರ್ ಅವರು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿದ್ದಾರೆ.

ಗೊಗೊಯಿ ಅವರ ನೇಮಕಾತಿ ದೇಶದ ನ್ಯಾಯಾಂಗದ  ಸ್ವಾತಂತ್ರ್ಯದ ಮೇಲೆಯೇ ಕಾರ್ಮೋಡ ಮೂಡಿಸಿದೆ ಎಂದು ಆಕೆ ತಮ್ಮ ಅಪೀಲಿನಲ್ಲಿ ಆರೋಪಿಸಿದ್ದಾರೆ. "ರಾಷ್ಟ್ರಪತಿಗಳು ಗೊಗೊಯಿ ಅವರನ್ನು ರಾಜ್ಯಸಭೆಗೆ ನಾಮಕರಣಗೊಳಿಸಿರುವ ಕ್ರಮವು ರಾಜಕೀಯ ನೇಮಕಾತಿಯ ಬಣ್ಣ  ಪಡೆದಿದೆ ಹಾಗೂ  ಅವರು ಸುಪ್ರೀಂ ಕೋರ್ಟನ್ನು ಮುನ್ನಡೆಸಿದ್ದ ಸಂದರ್ಭ ಅವರು ನೀಡಿದ್ದ ತೀರ್ಪುಗಳ ವಿಶ್ವಾಸಾರ್ಹತೆಯನ್ನೇ ಶಂಕಿಸುವಂತೆ ಮಾಡಿದೆ'' ಎಂದು ಮಧುಕೀಶ್ವರ್ ತಮ್ಮ ಪಿಐಎಲ್‍ ನಲ್ಲಿ ಹೇಳಿದ್ದಾರೆ.

ನ್ಯಾಯಾಧೀಶರು ನಿವೃತ್ತರಾದ ನಂತರ ಅವರು ಬೇರೆ ಹುದ್ದೆಗಳಿಗೆ ನೇಮಕಾತಿಗೊಳ್ಳುವುದನ್ನು ಈ ಹಿಂದೆ ವಿರೋಧಿಸಿದ್ದ ಗೊಗೊಯಿ ಅವರು ರಾಜ್ಯಸಭಾ ನಾಮಕರಣವನ್ನು ಏಕೆ ಒಪ್ಪಿದರು  ಎಂದೂ ಮಧು ಕೀಶ್ವರ್ ಪ್ರಶ್ನಿಸಿದ್ದಾರೆ.

ದೇಶದ ಮಾನಹಾನಿಗೈಯ್ಯಲು ಹಾಗೂ ನ್ಯಾಯಾಂಗದ ಮೇಲೆ ಆರೋಪ ಹೊರಿಸಲು ಇದು ದೇಶದ ವೈರಿಗಳಿಗೆ  ಆಸ್ಪದ ನೀಡುವುದು ಎಂದೂ ಅವರು ತಮ್ಮ ಅಪೀಲಿನಲ್ಲಿ ಹೇಳಿದ್ದಾರಲ್ಲದೆ, ಗೊಗೊಯಿ ಅವರ ನೇಮಕಾತಿಗೆ ತಡೆಯಾಜ್ಞೆ ನೀಡಬೇಕು, ಲೋಕಪಾಲ್ ಹಾಗೂ ಲೋಕಾಯುಕ್ತ ಕಾಯಿದೆ 2013ರಲ್ಲಿ ಮಾಡಿದಂತೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನಿವೃತ್ತಿ ನಂತರ ಬೇರೆ ಹುದ್ದೆಗಳನ್ನು ಹೊಂದುವುದಕ್ಕೆ ನಿರ್ಬಂಧ ಹೇರಬೇಕೆಂದೂ ಕೋರಿದ್ದಾರೆ.

ಆದರೆ ಮಧುಕೀಶ್ವರ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದು 'ದಾರಿ ತಪ್ಪಿಸುವ' ತಂತ್ರ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಮಧುಕೀಶ್ವರ್ ಅವರು ಸುಪ್ರೀಂಗೆ ಅರ್ಜಿ ಸಲ್ಲಿಸಿ ಆ ಮೂಲಕ ಬೇರೆ ಯಾರೂ ಈ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಲೇರದಂತೆ ಪರೋಕ್ಷವಾಗಿ ತಡೆಯುತ್ತಿದ್ದಾರೆ. ಇದು ದಾರಿ ತಪ್ಪಿಸುವ ತಂತ್ರವೇ ಹೊರತು ಬೇರೇನೂ ಅಲ್ಲ. ಈ ಪ್ರಕರಣದಲ್ಲಿ ಮಧು ಕೀಶ್ವರ್ ದುರ್ಬಲ ಪಿಐಎಲ್ ಸಲ್ಲಿಸಲಿದ್ದಾರೆ. ಕೋರ್ಟ್ ಈ ಪಿಐಎಲ್ ಅನ್ನು ವಜಾಗೊಳಿಸಿದ ನಂತರ ಇಂತಹ ಎಲ್ಲಾ ಅರ್ಜಿಗಳನ್ನು ವಜಾಗೊಳಿಸುತ್ತದೆ. ಇದು ಈ ನಡೆಯ ಹಿಂದಿನ ತಂತ್ರವಾಗಿದೆ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News