ಕೊರೋನಾವೈರಸ್ ನಿಂದ 2.5 ಕೋಟಿ ಉದ್ಯೋಗ ನಷ್ಟ ಸಾಧ್ಯತೆ: ವರದಿ

Update: 2020-03-19 11:24 GMT

ಹೊಸದಿಲ್ಲಿ: ಕೊರೋನಾವೈರಸ್ ಹಾವಳಿಯಿಂದಾಗಿ ಜಗತ್ತಿನಾದ್ಯಂತ 2.5 ಕೋಟಿ ಉದ್ಯೋಗ ನಷ್ಟ ಉಂಟಾಗಬಹುದು ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‍ಒ) ಬಿಡುಗಡೆಗೊಳಿಸಿರುವ ಆರಂಭಿಕ  ವರದಿ `ಕೋವಿಡ್-19 ಆ್ಯಂಡ್ ವರ್ಲ್ಡ್ ಆಫ್ ವರ್ಕ್: ಇಂಪ್ಯಾಕ್ಟ್ ಆ್ಯಂಡ್ ರೆಸ್ಪಾನ್ಸಸ್'' ಇದರಲ್ಲಿ ಹೇಳಲಾಗಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸಮನ್ವಯ ಸಾಧಿಸಿ ನೀತಿ ನಿರೂಪಿಸಿ ಅದನ್ನು ಜಾರಿಗೊಳಿಸಿದಲ್ಲಿ ಜಾಗತಿಕವಾಗಿ ಉದ್ಯೋಗ ಕ್ಷೇತ್ರದ ಮೇಲೆ ಕೊರೋನಾವೈರಸ್ ಬೀರುವ ಪರಿಣಾಮವನ್ನು ಕಡಿಮೆಗೊಳಿಸಬಹುದಾಗಿದೆ ಎಂದೂ ವರದಿ ತಿಳಿಸಿದೆ.

ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ, ಉದ್ಯೋಗ ಉಳಿಸಿಕೊಳ್ಳಲು ಬೆಂಬಲ (ಅಲ್ಪಾವಧಿ ಕೆಲಸ, ವೇತನ ಸಹಿತ ರಜೆ, ಇತರ ಸಬ್ಸಿಡಿಗಳು) ಹಾಗೂ ತೆರಿಗೆ ರಿಯಾಯಿತಿ ಮುಂತಾದ ಕ್ರಮಗಳನ್ನು ಕೈಗೊಳ್ಳಬಹುದು. ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಇಂತಹ  ಸವಲತ್ತುಗಳು ಅಗತ್ಯ ಎಂದು ವರದಿ ಹೇಳಿದೆ.

ನಿರ್ದಿಷ್ಟ ಆರ್ಥಿಕ ವಲಯಗಳಿಗೆ ಆರ್ಥಿಕ ಸಹಾಯ ಒದಗಿಸುವ ಪ್ರಸ್ತಾಪವನ್ನೂ ಅದರಲ್ಲಿ ಮಾಡಲಾಗಿದೆ.

ಕೊರೋನವೈರಸ್ ವ್ಯಾಪಕವಾದಂತೆಯೇ ಉದ್ಯೋಗಿಗಳ ಕೆಲಸದ ಅವಧಿ ಹಾಗೂ ವೇತನಗಳೂ ಕಡಿಮೆಯಾಗಬಹುದು ಎಂದು ವರದಿ ಹೇಳಿದೆ. ಇದು ಮುಂದೆ  ವಿವಿಧ ವಸ್ತುಗಳಿಗೆ ಕಡಿಮೆ ಬೇಡಿಕೆಗೆ ಕಾರಣವಾಗಿ ಉದ್ಯಮ ಹಾಗೂ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News