ಬಿಸಿಲಿನಲ್ಲಿ 15 ನಿಮಿಷ ಕುಳಿತರೆ ಕೊರೋನಾವೈರಸ್ ನಾಶ: ಕೇಂದ್ರ ಸಹಾಯಕ ಆರೋಗ್ಯ ಸಚಿವರ ಸಲಹೆ!

Update: 2020-03-19 11:23 GMT

ಹೊಸದಿಲ್ಲಿ: ದೇಶದ ವಿವಿಧೆಡೆ ಕೊರೋನವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ನಡುವೆಯೇ ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ಕೇಂದ್ರ ಸಹಾಯಕ ಆರೋಗ್ಯ ಸಚಿವ ಅಶ್ವಿನಿ ಚೌಬೆ ಜನರಿಗೆ ವಿಶೇಷ ಸಲಹೆಯೊಂದನ್ನು ನೀಢಿದ್ದಾರೆ.

"ಬಿಸಿಲಿನಲ್ಲಿ 15 ನಿಮಿಷ ಕುಳಿತರೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕೊರೋನವೈರಸ್ ಅನ್ನು ನಾಶಪಡಿಸಬಹುದು'' ಎಂದು ಚೌಬೆ ಹೇಳಿದ್ದಾರೆ. "ಗೋಮೂತ್ರವನ್ನು ಕ್ಯಾನ್ಸರ್‍ ಗೆ ಚಿಕಿತ್ಸೆ ನೀಡಲು ಬಳಸಬಹುದು'' ಎಂಬ ಸಲಹೆಯನ್ನು ಈ ಹಿಂದೆ ನೀಡಿದ್ದ ಸಚಿವ ಇದೀಗ ತಮ್ಮ ಹೊಸ ಸಲಹೆಯಿಂದ ಹಲವರ ಗಮನವನ್ನೂ ಸೆಳೆದಿದ್ದಾರೆ.

"ಪೂರ್ವಾಹ್ನ 11 ಗಂಟೆಯಿಂದ ಅಪರಾಹ್ನ 2 ಗಂಟೆ ತನಕ ಬಿಸಿಲಿನ ತಾಪ ಅಧಿಕವಾಗಿರುತ್ತದೆ. ಆ ಸಮಯ ನಾವು 15 ನಿಮಿಷ ಬಿಸಿಲಿನಲ್ಲಿ ಕುಳಿತರೆ ನಮ್ಮ ವಿಟಮಿನ್ ಡಿ ಅಂಶ ಸುಧಾರಿಸುವುದು. ಅದು ನಮ್ಮ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸಿ ಕೊರೋನವೈರಸ್‍  ನಂತಹ ವೈರಸ್ ಅನ್ನು ಕೊಲ್ಲುವುದು'' ಎಂದು ಚೌಬೆ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಕೊರೋನವೈರಸ್ ಕುರಿತಂತೆ ಯಾವುದೇ ಅವೈಜ್ಞಾನಿಕ ಹೇಳಿಕೆ ನೀಡದಂತೆ ತಮ್ಮ ಸಚಿವರು ಹಾಗೂ ಸಂಸದರಿಗೆ ಪ್ರಧಾನಿ ಮೋದಿ ಕಳೆದ ರಾತ್ರಿ ಸೂಚಿಸಿದ ಬೆನ್ನಿಗೇ ಚೌಬೆ ಅವರ ಹೇಳಿಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News