ನಾಳೆಯೇ ವಿಶ್ವಾಸಮತ ಯಾಚನೆ ನಡೆಸಿ: ಕಮಲ್ ನಾಥ್ ಸರಕಾರಕ್ಕೆ ಸುಪ್ರೀಂ ಆದೇಶ

Update: 2020-03-19 16:31 GMT

ಹೊಸದಿಲ್ಲಿ,ಮಾ.19: ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಯಾಚಿಸುವಂತೆ ಮಧ್ಯಪ್ರದೇಶದ ಕಾಂಗ್ರೆಸ್ ನೇತೃತ್ವದ ಕಮಲನಾಥ್ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯವು ಇಂದು ಆದೇಶಿಸಿದೆ.

ಕಮಲನಾಥ್ ಸರಕಾರದಿಂದ ವಿಶ್ವಾಸಮತ ಯಾಚನೆಗೆ ತಕ್ಷಣ ಆದೇಶಿಸುವಂತೆ ಕೋರಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಅವರು ಎರಡು ದಿನಗಳ ಹಿಂದೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ಈ ಮೊದಲು ಸರ್ವೋಚ್ಚ ನ್ಯಾಯಾಲಯವು ವೀಡಿಯೊ ಲಿಂಕ್ ಮೂಲಕ ಬಂಡುಕೋರ ಕಾಂಗ್ರೆಸ್ ಸದಸ್ಯರೊಡನೆ ಮಾತುಕತೆ ಸಾಧ್ಯವೇ ಎನ್ನುವುದನ್ನು ಪರಿಶೀಲಿಸುವಂತೆ ಮತ್ತು ನಂತರ ಅವರ ರಾಜೀನಾಮೆಗಳ ಬಗ್ಗೆ ನಿರ್ಧರಿಸುವಂತೆ ವಿಧಾನಸಭಾ ಸ್ಪೀಕರ್‌ಗೆ ಸೂಚಿಸಿತ್ತು.

ಸದನವು ಅಧಿವೇಶನದಲ್ಲಿ ಇಲ್ಲದಿದ್ದರೆ ಮತ್ತು ಸರಕಾರವು ಬಹುಮತವನ್ನು ಕಳೆದುಕೊಂಡಿದ್ದರೆ ವಿಶ್ವಾಸಮತವನ್ನು ನಡೆಸುವಂತೆ ಸ್ಪೀಕರ್‌ಗೆ ಆದೇಶಿಸಲು ರಾಜ್ಯಪಾಲರಿಗೆ ಅಧಿಕಾರವಿದೆ ಎಂದೂ ಸರ್ವೋಚ್ಚ ನ್ಯಾಯಾಲಯವು ತಿಳಿಸಿದೆ.

ನ್ಯಾಯಾಲಯದಲ್ಲಿ ಸ್ಪೀಕರ್‌ರನ್ನು ಪ್ರತಿನಿಧಿಸಿದ್ದ ಅಭಿಷೇಕ ಮನು ಸಿಂಘ್ವಿ, ಬಂಡುಕೋರ ಶಾಸಕರನ್ನು ಭೇಟಿಯಾಗಲು ಅವರಿಗೆ ಸಾಧ್ಯವಿಲ್ಲ ಮತ್ತು ಅದರ ಬದಲಿಗೆ ರಾಜೀನಾಮೆಗಳ ಕುರಿತು ನಿರ್ಧರಿಸಲು ಎರಡು ವಾರಗಳಂತಹ ನ್ಯಾಯಯುತ ಕಾಲಾವಕಾಶವನ್ನು ನ್ಯಾಯಾಲಯವು ಸೂಚಿಸಬಹುದಾಗಿದೆ ಎಂದು ತಿಳಿಸಿದರು. ಸರ್ವೋಚ್ಚ ನ್ಯಾಯಾಲಯವೂ ಸ್ಪೀಕರ್ ವಿವೇಚನಾಧಿಕಾರವನ್ನು ರದ್ದುಗೊಳಿಸುವಂತಿಲ್ಲ ಎಂದರು.

 ಮಧ್ಯಪ್ರದೇಶದ 16 ಬಂಡುಕೋರ ಶಾಸಕರನ್ನು ದಿಗ್ಬಂಧನದಲ್ಲಿರಿಸುವಂತಿಲ್ಲ ಮತ್ತು ಸದನಕ್ಕೆ ತಾವು ಹಾಜರಾಗಬೇಕೇ ಎನ್ನುವುದನ್ನು ಅವರು ನಿರ್ಧರಿಸಬಹುದಾಗಿದೆ ಎಂದು ಬುಧವಾರ ಹೇಳಿದ್ದ ಸರ್ವೋಚ್ಚ ನ್ಯಾಯಾಲಯವು,ಬಂಡುಕೋರ ಶಾಸಕರನ್ನು ನ್ಯಾಯಾಧೀಶರ ಚೇಂಬರ್‌ನಲ್ಲಿ ಹಾಜರುಪಡಿಸಲು ಕೋರಿದ್ದ ಪ್ರಸ್ತಾವವನ್ನೂ ತಿರಸ್ಕರಿಸಿತ್ತು.

ಬಂಡುಕೋರ ಶಾಸಕರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು,ತನ್ನ ಕಕ್ಷಿದಾರರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ಬಯಸುತ್ತಿಲ್ಲ ಮತ್ತು ಅದನ್ನು ಅವರಿಗೆ ಅನಿವಾರ್ಯವಾಗಿಸುವ ಯಾವುದೇ ಕಾನೂನು ಇಲ್ಲ. ಸ್ವಯಿಚ್ಛೆಯಿಂದ ರಾಜೀನಾಮೆಗೆ ನಿರ್ಧರಿಸಿದ್ದಾಗಿ ಅವರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ ಮತ್ತು ಇದನ್ನು ಅಫಿಡವಿಟ್‌ನಲ್ಲಿಯೂ ಉಲ್ಲೇಖಿಸಿದ್ದಾರೆ. ಅವರು ಸಂವಿಧಾನಕ್ಕನುಗುಣವಾಗಿ ಪರಿಣಾಮಗಳನ್ನು ಎದುರಿಸಲು ಸಿದ್ಧರಿದ್ದಾರೆ,ಆದರೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ಬಯಸುತ್ತಿಲ್ಲ ಎಂದು ತಿಳಿಸಿದರು.

  ಬಂಡುಕೋರ ಶಾಸಕರೊಂದಿಗೆ ರಹಸ್ಯ ಮಾತುಕತೆ:ಕಮಲನಾಥ್

ತಾನು ಬಂಡುಕೋರ ಕಾಂಗ್ರೆಸ್ ಶಾಸಕರೊಂದಿಗೆ ರಹಸ್ಯ ಮಾತುಕತೆಗಳನ್ನು ನಡೆಸುತ್ತಿದ್ದೇನೆ ಮತ್ತು ತನ್ನ ಬಹುಮತವನ್ನು ಉಳಿಸಿಕೊಳ್ಳುವ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಮುಖ್ಯಮಂತ್ರಿ ಕಮಲನಾಥ್ ಅವರು ಗುರುವಾರ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದರು. ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ಬಂಡುಕೋರರ ಬೆಂಬಲದೊಂದಿಗೆ ಅಧಿಕಾರಕ್ಕೆ ಮರಳುವ ಸಾಧ್ಯತೆಯನ್ನು ಅವರು ತಳ್ಳಿ ಹಾಕಿದರು.

ಜ್ಯೋತಿರಾದಿತ್ಯ ಸಿಂದಿಯಾ ಅವರ ಬಿಜೆಪಿ ಸೇರ್ಪಡೆ ಕುರಿತಂತೆ ಕಮಲನಾಥ್, ಅವರು ಪಕ್ಷವನ್ನು ತೊರೆಯುತ್ತಾರೆ ಎಂದು ತಾನೆಂದಿಗೂ ಯೋಚಿಸಿರಲಿಲ್ಲ, ಆದರೆ ಪ್ರತಿಯೊಬ್ಬರೂ ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುತ್ತಾರೆ ಮತ್ತು ಅವರು ತನ್ನ ಭವಿಷ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News