‘ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’: ನಿರ್ಭಯಾ ಪ್ರಕರಣದ ದೋಷಿಯ ಪತ್ನಿಯ ಬೆದರಿಕೆ
ಹೊಸದಿಲ್ಲಿ,ಮಾ.19: ನಿರ್ಭಯಾ ಅತ್ಯಾಚಾರ-ಹತ್ಯೆ ಪ್ರಕರಣದ ಎಲ್ಲ ನಾಲ್ವರು ದೋಷಿಗಳು ನೇಣುಗಂಬವನ್ನೇರಲು ಶುಕ್ರವಾರ ನಸುಕಿನ 5:30 ಗಂಟೆಗೆ ಮುಹೂರ್ತ ನಿಗದಿಯಾಗಿದ್ದು, ನೇಣಿನಿಂದ ತಪ್ಪಿಸಿಕೊಳ್ಳುವ ಅವರ ಎಲ್ಲ ಪ್ರಯತ್ನಗಳು ಮುಗಿದಿವೆ.
ಈ ಪೈಕಿ ಮೂವರು ಸಲ್ಲಿಸಿದ್ದ ಅರ್ಜಿಯನ್ನು ಸಹ ನ್ಯಾಯಾಲಯವು ಗುರುವಾರ ವಜಾಗೊಳಿಸಿದೆ. ತನ್ಮಧ್ಯೆ ದೋಷಿಗಳ ಪೈಕಿ ಅಕ್ಷಯ ಸಿಂಗ್‌ನ ಪತ್ನಿ ಪುನೀತಾ ದೇವಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ನಾಟಕೀಯ ವಿದ್ಯಮಾನ ಇಂದು ದಿಲ್ಲಿಯ ಪಟಿಯಾಲಾ ಹೌಸ್ ನ್ಯಾಯಾಲಯದ ಹೊರಗೆ ನಡೆದಿದೆ.
ಮರಣದಂಡನೆ ಜಾರಿಯನ್ನು ಮುಂದೂಡಲು ದೋಷಿಗಳು ಸಾಧ್ಯವಿರುವ ಎಲ್ಲ ತಂತ್ರಗಳನ್ನೂ ಬಳಸಿದ್ದರು. ಅವರ ಪೈಕಿ ಮೂವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಲಿದ್ದ ನ್ಯಾಯಾಲಯದ ಮುಂದೆ ಬೆಳಿಗ್ಗೆಯಿಂದಲೇ ಪುನೀತಾ ತನ್ನ ಮಗುವಿನೊಡನೆ ತಳವೂರಿದ್ದಳು. ಆತಂಕಗೊಂಡವಳಂತೆ ಕಂಡು ಬಂದಿದ್ದ ಆಕೆ ಬವಳಿ ಬಂದು ಬಿದ್ದಿದ್ದಳು. ಪ್ರಜ್ಞೆ ಮರುಕಳಿಸಿದ ಬಳಿಕ ‘ನಾನು ಬದುಕಲು ಬಯಸುವುದಿಲ್ಲ,ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ’ಎಂದು ಕೂಗುತ್ತ ತನ್ನನ್ನೇ ಚಪ್ಪಲಿಯಿಂದ ಹೊಡೆದುಕೊಳ್ಳಲು ಆರಂಭಿಸಿದ್ದಳು.
ಪುನೀತಾ ಬಿಹಾರದ ನ್ಯಾಯಾಲಯವೊಂದರಲ್ಲಿ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ್ದು,ಅತ್ಯಾಚಾರದ ಆರೋಪದಲ್ಲಿ ನೇಣುಗಂಬವನ್ನೇರಿದ ವ್ಯಕ್ತಿಯ ವಿಧವೆ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲು ತಾನು ಬಯಸುತ್ತಿಲ್ಲ ಎಂದು ವಾದಿಸಿದ್ದಾಳೆ.
ತನ್ನ ಗಂಡ ಅಮಾಯಕನಾಗಿದ್ದಾನೆ. ಆತನನ್ನು ನೇಣಿಗೇರಿಸುವ ಮುನ್ನ ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಲು ಬಯಸಿದ್ದೇನೆ ಎಂದೂ ಆಕೆ ತನ್ನ ಅರ್ಜಿಯಲ್ಲಿ ಹೇಳಿದ್ದಾಳೆ.