ಕೊರೊನಾವೈರಸ್: ದೇಶಾದ್ಯಂತ 'ಜನತಾ ಕರ್ಫ್ಯೂ'ಗೆ ಪ್ರಧಾನಿ ಮೋದಿ ಕರೆ

Update: 2020-03-19 14:55 GMT

ಹೊಸದಿಲ್ಲಿ: ದೇಶದಲ್ಲಿ ಕೊರೊನಾವೈರಸ್ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ 'ಜನತಾ ಕರ್ಫ್ಯೂ' ನಡೆಸಲು ಪ್ರಧಾನಿ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ.

ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, "ನಿಮ್ಮ ಕೆಲ ವಾರಗಳು ನನಗೆ ಬೇಕಾಗಿದೆ. ಕೊರೊನಾವೈರಸ್ ಗೆ ಇನ್ನೂ ಸರಿಯಾದ ಲಸಿಕೆ ಸಿಕ್ಕಿಲ್ಲ. ಜಗತ್ತು ಸಮಸ್ಯೆಯನ್ನು ಎದುರಿಸುತ್ತಿದೆ. ದೊಡ್ಡ ದೇಶಗಳಲ್ಲೂ ಈ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲಿ ಈ ಮಹಾಮಾರಿ ಹರಡುವುದಿಲ್ಲ ಎಂದು ನಾವು ಆಲೋಚಿಸುವುದು ತಪ್ಪು ಎಂದವರು ಹೇಳಿದರು.

ದೇಶದ ನಾಗರಿಕರು ಕೇಂದ್ರ, ರಾಜ್ಯ ಸರಕಾರಗಳ ಸೂಚನೆಗಳು ಪಾಲಿಸಬೇಕು ಈ ಮೂಲಕ ಸೋಂಕುಪೀಡಿತರಾಗುವುದರಿಂದ ನಾವು ಪಾರಾಗಬೇಕು. ಇತರರೂ ನಮ್ಮಿಂದ ತೊಂದರೆಗೊಳಗಾಗಬಾರದು. ಮನೆಯಿಂದಲೇ ವ್ಯವಹಾರ, ಉದ್ಯಮ, ಕೆಲಸಗಳನ್ನು ಮಾಡಿ ಎಂದವರು ಕರೆ ನೀಡಿದರು.

ಇದೇ ಸಂದರ್ಭ ಜನರಿಂದ ಮತ್ತೊಂದು ಬೆಂಬಲವನ್ನು ಕೇಳಿದ ಅವರು, ಜನರು 'ಜನತಾ ಕರ್ಫ್ಯೂ'ವನ್ನು ಹೇರಬೇಕು ಎಂದರು. "ಜನರಿಂದ ಜನರಿಗಾಗಿ ಜನರೇ ಹೇರುವ ಕರ್ಫ್ಯೂ 'ಜನತಾ ಕರ್ಫ್ಯೂ'. ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಜನರು ಈ ಕರ್ಫ್ಯೂ ವಿಧಿಸಿಕೊಳ್ಳಬೇಕು. ಈ ಸಮಯದಲ್ಲಿ ಮನೆಯಿಂದ ಹೊರಬರಬೇಡಿ, ಮಾರುಕಟ್ಟೆಗೆ ಹೋಗಬೇಡಿ. ಇದರ ಪ್ರಯೋಜನ ಮುಂದಿನ ದಿನಗಳಲ್ಲಿ ಲಭಿಸುತ್ತದೆ. ರಾಜ್ಯ ಸರಕಾರಗಳು ಈ ಬಗ್ಗೆ ಗಮನಹರಿಸಬೇಕು. ಜನತಾ ಕರ್ಫ್ಯೂಗೆ ಬೇಕಾದ ಕ್ರಮ ಕೈಗೊಳ್ಳಬೇಕು. ಎಲ್ಲಾ ಸಂಘಟನೆಗಳು, ಧಾರ್ಮಿಕ, ಸಾಮಾಜಿಕ ಸಂಘಟನೆಗಳು ಈ ಬಗ್ಗೆ ಕೆಲಸ ಮಾಡಬೇಕು. ಈ ಬಗ್ಗೆ ಸಾಧ್ಯವಾದರೆ 10 ಜನರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಬೇಕು" ಎಂದವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News