ಕೊರೋನವೈರಸ್ ‘ಮಾನವತೆಯ ಶತ್ರು’
ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 19: ನೂತನ-ಕೊರೋನವೈರಸ್ ‘ಮಾನವತೆಯ ಶತ್ರು’ವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಬುಧವಾರ ಬಣ್ಣಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಮಹಾ ಸಾಂಕ್ರಾಮಿಕ ರೋಗದ ಸೋಂಕಿಗೆ ಒಳಗಾದವರ ಸಂಖ್ಯೆ 2 ಲಕ್ಷ ದಾಟಿದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
‘‘ಈ ಕೊರೋನವೈರಸ್ ಹಿಂದೆಂದೂ ನೋಡದ ಬೆದರಿಕೆಯನ್ನು ನಮಗೆ ಒಡ್ಡುತ್ತಿದೆ’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೇಬ್ರಿಯೇಸಸ್ ಹೇಳಿದರು. ‘‘ಮಾನವತೆಯ ವಿರುದ್ಧದ ಶತ್ರುವಾಗಿರುವ ಸಾಮಾನ್ಯ ಶತ್ರುವಿನ ವಿರುದ್ಧ ಒಂದಾಗಿ ಹೋರಾಡಲು ನಮಗೊಂದು ಅಭೂತಪೂರ್ವ ಅವಕಾಶ ಲಭಿಸಿದೆ’’ ಎಂದರು.
ತಯಾರಿ ಮಾಡಿಕೊಳ್ಳಲು ಹಾಗೂ ಆದ್ಯತೆಗಳನ್ನು ಗುರುತಿಸಲು ನೆರವು ನೀಡುವ ನಿಟ್ಟಿನಲ್ಲಿ ಆರೋಗ್ಯ ಸಚಿವರು, ಸರಕಾರಗಳ ಮುಖ್ಯಸ್ಥರು, ಆರೋಗ್ಯ ಕೆಲಸಗಾರರು, ಆಸ್ಪತ್ರೆ ನಿರ್ವಾಹಕರು, ಉದ್ಯಮಗಳ ನಾಯಕರು ಮತ್ತು ಇತರರೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ದಿನ ಮಾತನಾಡುತ್ತಿದೆ ಎಂದು ಗೇಬ್ರಿಯೇಸಸ್ ತಿಳಿಸಿದರು.