ಇಟಲಿ: ಕೊರೋನವೈರಸ್ ಸ್ಥಿತಿ ಚೀನಾಕ್ಕಿಂತಲೂ ಭೀಕರ

Update: 2020-03-19 15:33 GMT

ರೋಮ್ (ಇಟಲಿ), ಮಾ. 19: ಇಟಲಿಯಲ್ಲಿ ಬುಧವಾರ ಒಂದೇ ದಿನದಲ್ಲಿ ನೋವೆಲ್-ಕೊರೋನವೈರಸ್‌ನಿಂದಾಗಿ 475 ಸಾವುಗಳು ಸಂಭವಿಸಿವೆ. ಇದು ಚೀನಾದಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸೋಂಕು ಪತ್ತೆಯಾದಂದಿನಿಂದ ಯಾವುದೇ ದೇಶದಲ್ಲಿ ಒಂದು ದಿನದಲ್ಲಿ ವರದಿಯಾದ ಅತ್ಯಧಿಕ ಅಧಿಕೃತ ಸಾವಿನ ಸಂಖ್ಯೆಯಾಗಿದೆ.

ಇದರೊಂದಿಗೆ, ಇಟಲಿಯಲ್ಲಿ ಈ ಸಾಂಕ್ರಾಮಿಕದಿಂದಾಗಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 2,978ಕ್ಕೆ ಏರಿದೆ. ಇದು ಚೀನಾದಿಂದ ಹೊರಗೆ ದಾಖಲಾದ ಒಟ್ಟು ಸಾವಿನ ಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಾಗಿದೆ.

ಇಟಲಿಯಲ್ಲಿ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ ಈಗ 35,713ಕ್ಕೆ ಏರಿದೆ. ಒಂದು ದಿನದಲ್ಲಿ ದಾಖಲಾದ ಈ ಹಿಂದಿನ ಅತ್ಯಧಿಕ ಸಾವಿನ ಸಂಖ್ಯೆಯೂ ರವಿವಾರ ಇಟಲಿಯಲ್ಲೇ ವರದಿಯಾಗಿತ್ತು. ರವಿವಾರ 368 ಸಾವುಗಳು ದಾಖಲಾಗಿದ್ದವು.

ಕೋವಿಡ್-19 ಸೋಂಕಿನಿಂದಾಗಿ ಜಗತ್ತಿನಾದ್ಯಂತ ಸಂಭವಿಸಿರುವ ಒಟ್ಟು ಸಾವಿನ 34.2 ಶೇಕಡ ಆರು ಕೋಟಿ ಜನಸಂಖ್ಯೆಯ ಇಟಲಿಯಲ್ಲೇ ಸಂಭವಿಸಿದೆ.

ಇಟಲಿಯಾದ್ಯಂತ ಹೇರಲಾಗಿರುವ ಬೀಗಮುದ್ರೆ ಇದೀಗ ಎರಡನೇ ವಾರಕ್ಕೆ ಕಾಲಿರಿಸಿರುವ ಹೊರತಾಗಿಯೂ, ಮೆಡಿಟರೇನಿಯನ್ ದೇಶದಲ್ಲಿ ಸಾವಿನ ದರವು ವೇಗವಾಗಿ ಏರುತ್ತಿದೆ.

ವಿಶ್ವಾಸವಿಡಿ, ಧೈರ್ಯದಿಂದ ಇರಿ: ಜನರಿಗೆ ಅಧಿಕಾರಿಗಳ ಕರೆ

ಸರಕಾರದ ಮೇಲೆ ವಿಶ್ವಾಸವಿಡಿ ಹಾಗೂ ಧೈರ್ಯದಿಂದ ಇರಿ ಎಂಬುದಾಗಿ ಅಧಿಕಾರಿಗಳು ಜನರಿಗೆ ಕರೆ ನೀಡಿದ್ದಾರೆ.

‘‘ಯಾವತ್ತೂ ನಂಬಿಕೆ ಕಳೆದುಕೊಳ್ಳದಿರುವುದು ಮುಖ್ಯ’’ ಎಂದು ಇಟಲಿಯ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಸಿಲ್ವಿಯೊ ಬ್ರಸಫೆರೊ ರಾಷ್ಟ್ರವ್ಯಾಪಿ ಟೆಲಿವಿಶನ್‌ನಲ್ಲಿ ಪ್ರಸಾರಗೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

 ‘‘ರಾಷ್ಟ್ರವ್ಯಾಪಿ ಬೀಗಮುದ್ರೆಯ ಫಲಿತಾಂಶವನ್ನು ನೋಡಲು ಇನ್ನೂ ಕೆಲವು ದಿನಗಳು ಬೇಕಾಗುತ್ತವೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News