ಸೋಂಕು ಹರಡುವ ಭೀತಿ: ವಾಘಾ ಗಡಿ ಮುಚ್ಚಿದ ಪಾಕಿಸ್ತಾನ
Update: 2020-03-19 21:27 IST
ಇಸ್ಲಾಮಾಬಾದ್, ಮಾ. 19: ಪಾಕಿಸ್ತಾನದ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 341ಕ್ಕೆ ಏರಿದಂತೆಯೇ, ಭಾರತದೊಂದಿಗಿನ ವಾಘಾ ಗಡಿಯನ್ನು ಎರಡು ವಾರಗಳ ಕಾಲ ಮುಚ್ಚಲು ಪಾಕಿಸ್ತಾನ ಗುರುವಾರ ನಿರ್ಧರಿಸಿದೆ.
‘‘ತಕ್ಷಣದಿಂದ ಜಾರಿಗೆ ಬರುವಂತೆ ಎರಡು ವಾರಗಳ ಆರಂಭಿಕ ಅವಧಿಗೆ ಭಾರತದೊಂದಿಗಿನ ಗಡಿಯನ್ನು ಮುಚ್ಚಲಾಗಿದೆ’’ ಎಂದು ಆಂತರಿಕ ಸಚಿವಾಲಯವು ಗುರುವಾರ ಅಧಿಸೂಚನೆ ಹೊರಡಿಸಿದೆ.
‘‘ಎರಡೂ ದೇಶಗಳ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು, ಸೋಂಕು ಹರಡುವುದನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಅದು ಹೇಳಿದೆ.
ಪಾಕಿಸ್ತಾನವು ಈಗಾಗಲೇ ಇರಾನ್ ಮತ್ತು ಅಫ್ಘಾನಿಸ್ತಾನದೊಂದಿಗಿನ ಪಶ್ಚಿಮ ಗಡಿಯನ್ನು ಮುಚ್ಚಿದೆ.
ಪಾಕ್‌ನಲ್ಲಿ 2 ಸಾವು
ಕೊರೋನವೈರಸ್‌ನಿಂದಾಗಿ ದೇಶದಲ್ಲಿ ಎರಡು ಸಾವುಗಳು ಸಂಭವಿಸಿವೆ ಎಂದು ಪಾಕಿಸ್ತಾನ ಬುಧವಾರ ವರದಿ ಮಾಡಿದೆ. ದೇಶಾದ್ಯಂತ ಸೋಂಕು ಪೀಡಿತರ ಸಂಖ್ಯೆ 341ಕ್ಕೆ ಏರಿದೆ.