ಕೇರಳದ ಎಲ್ಲ ಜಿಲ್ಲೆಗಳಲ್ಲಿ ಕೊರೋನ ಶಂಕಿತರ ಪಾಲನ ಕೇಂದ್ರ

Update: 2020-03-19 17:07 GMT

ತಿರುವನಂತಪುರ, ಮಾ. 19: ಆರೋಗ್ಯ ಪ್ರಾಧಿಕಾರದ ಎಚ್ಚರಿಕೆ ಹಿನ್ನೆಲೆಯಲ್ಲಿ ಮುಂದಿನ ಎರಡು ವಾರಗಳ ಕಾಲ ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಕೇರಳ ಸರಕಾರ ಎಲ್ಲ ಜಿಲ್ಲೆಗಳಲ್ಲಿ ಕೊರೋನ ಶಂಕಿತರ ಪಾಲನ ಕೇಂದ್ರ ಆರಂಭಿಸಲು ನಿರ್ಧರಿಸಿದೆ.

ಹೊಟೇಲ್‌ಗಳು ಹಾಗೂ ಲಾಡ್ಜ್‌ಗಳನ್ನು ಕೊರೋನ ಶಂಕಿತರ ಪಾಲನಾ ಕೇಂದ್ರಗಳಾಗಿ ಪರಿವರ್ತಿಸಲಾಗುವುದು. ‘‘ಈ ಉದ್ದೇಶಕ್ಕಾಗಿ ತಮ್ಮ ಕಟ್ಟಡಗಳನ್ನು ವರ್ಗಾಯಿಸಲು ಹಲವು ಹೊಟೇಲ್ ಹಾಗೂ ಲಾಡ್ಜ್‌ಗಳ ಮಾಲಕರು ಒಪ್ಪಿಕೊಂಡಿದ್ದಾರೆ’’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಹೇಳಿದ್ದಾರೆ.

ನಿಯಂತ್ರಣ ಕ್ರಮಗಳನ್ನು ತೀವ್ರಗೊಳಿಸುವ ಒಂದು ಭಾಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೊರ ರೋಗಿಗಳ ವಿಭಾಗದ ಕಾರ್ಯನಿರ್ವಹಣೆಯ ಸಮಯವನ್ನು ಸಂಜೆ 6 ಗಂಟೆ ವರೆಗೆ ವಿಸ್ತರಿಸಲಾಗಿದೆ.

ಎಲ್ಲ ಎಂಟಿಎಂ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಅನ್ನು ಕಡ್ಡಾಯಗೊಳಿಸಲಾಗಿದೆ. ಆನ್‌ಲೈನ್ ಹಾಗೂ ಹೋಮ್ ಡೆಲಿವರಿ ವ್ಯವಸ್ಥೆ ವಿಸ್ತರಿಸುವಂತೆ ಅಂಗಡಿ ಮಾಲಕರಿಗೆ ತಿಳಿಸಲಾಗಿದೆ. ಪ್ರತಿ ಜಿಲ್ಲೆಯ ನಿವೃತ್ತ ವೈದ್ಯರು ಹಾಗೂ ವೈದ್ಯಕೀಯ ತಜ್ಞರ ಹೆಸರನ್ನು ಪಟ್ಟಿ ಮಾಡಲಾಗುವುದು. ಅಗತ್ಯ ಬಿದ್ದರೆ, ಅವರ ಸೇವೆ ಪಡೆಯಲಾಗುವುದು.

ರಾಜ್ಯದ ಧಾರ್ಮಿಕ ಕ್ಷೇತ್ರಗಳ ಮುಖ್ಯಸ್ಥರೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿರುವ ಮುಖ್ಯಮಂತ್ರಿ ಆರಾಧನ ಸ್ಥಳಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News