ಟಿ-20 ವಿಶ್ವಕಪ್: ಇಂಗ್ಲೆಂಡ್ ಗರಿಷ್ಠ ರನ್ ಚೇಸಿಂಗ್ ಘಟನೆಗೆ 4 ವರ್ಷ

Update: 2020-03-19 17:31 GMT

ಮುಂಬೈ , ಮಾ.19: ಟ್ವೆಂಟಿ-20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಗರಿಷ್ಠ ರನ್‌ಗಳ ಸವಾಲನ್ನು ಬೆನ್ನಟ್ಟಿ ಗೆಲುವು ದಾಖಲಿಸಿದ ಘಟನೆಗೆ 4 ವರ್ಷ ತುಂಬಿದೆ. 2016, ಮಾರ್ಚ್ 16ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 230 ರನ್‌ಗಳ ಗೆಲುವಿನ ಸವಾಲು ಪಡೆದು ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆ 8 ವಿಕೆಟ್‌ಗಳ ನಷ್ಟದಲ್ಲಿ 230 ರನ್ ಗಳಿಸಿ ಗೆಲುವಿನ ದಡ ಸೇರಿತ್ತು.

ಇಂಗ್ಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಲೆಕ್ಸ್ ಹೇಲ್ಸ್ ಮತ್ತು ಜೇಸನ್ ರಾಯ್ ಕೇವಲ 2.3 ಓವರ್‌ಗಳಲ್ಲಿ 48 ರನ್ ಸೇರಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ದಕ್ಷಿಣ ಆಫ್ರಿಕಾ ಬಳಿಕ ತಿರುಗೇಟು ನೀಡಿ 10 ಓವರ್‌ಗಳಲ್ಲಿ 111ಕ್ಕೆ 4 ವಿಕೆಟ್‌ಗಳನ್ನು ಉಡಾಯಿಸಿತು.

   ಜೋ ರೂಟ್ ಮತ್ತು ಜೋಸ್ ಬಟ್ಲರ್ 5ನೇ ವಿಕೆಟ್‌ಗೆ 75 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಆಧರಿಸಿದ್ದರು. ಬಟ್ಲರ್ 14 ಎಸೆತಗಳಲ್ಲಿ 21 ರನ್‌ಗಳನ್ನು ಸೇರಿಸಿದ್ದರು. ಆದರೆ 15.4ನೇ ಓವರ್‌ನಲ್ಲಿ ಬಟ್ಲರ್ ಅವರು ತಾಹಿರ್‌ಗೆ ವಿಕೆಟ್ ಒಪ್ಪಿಸಿದ್ದರು. ರೂಟ್ 19ನೇ ಓವರ್‌ನಲ್ಲಿ ಔಟಾಗಿದ್ದರು. ಅವರು 44 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಲ್ಲಿ 83 ರನ್ ಗಳಿಸಿದ್ದರು. ಮೊಯಿನ್ ಅಲಿ ಅಂತಿಮ ಓವರ್‌ನಲ್ಲಿ ತಂಡದ ಗೆಲುವಿಗೆ ಅಗತ್ಯದ ರನ್ ಸೇರಿಸಿದ್ದರು. ಇಂಗ್ಲೆಂಡ್ ಫೈನಲ್ ತಲಪಿದ್ದರೂ ವೆಸ್ಟ್‌ಇಂಡೀಸ್ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ಅದು ಪ್ರಶಸ್ತಿ ಗೆಲ್ಲುವ ಅವಕಾಶ ಕೈ ಚೆಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News