ಜಾನ್ಸನ್‌ಗೆ ಒಲಿಂಪಿಕ್ಸ್ ಅರ್ಹತೆಯ ಚಿಂತೆ

Update: 2020-03-19 18:00 GMT

 ಚೆನ್ನೈ, ಮಾ.19: ಟೋಕಿಯೊ ಒಲಿಂಪಿಕ್ಸ್‌ಗೆ ಇನ್ನಷ್ಟೇ ತೇರ್ಗಡೆಯಾಗಬೇಕಾಗಿರುವ ಅಥ್ಲೀಟ್‌ಗಳು ವಿಶ್ವದಾದ್ಯಂತ ಪ್ರತಿದಿನವೂ ಅರ್ಹತಾ ಟೂರ್ನಿಗಳು ರದ್ದು ಅಥವಾ ಮುಂದೂಡಲ್ಪಡುತ್ತಿರುವುದಕ್ಕೆ ಆತಂಕಕ್ಕೀಡಾಗಿದ್ದಾರೆ. ಇದಕ್ಕೆ ಭಾರತದ ಪ್ರಮುಖ ಮಧ್ಯಮ ಅಂತರದ ಓಟಗಾರ ಜಿನ್ಸನ್ ಜಾನ್ಸನ್ ಕೂಡ ಹೊರತಾಗಿಲ್ಲ. ಜಾನ್ಸನ್ ತನ್ನ ಅರ್ಹತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನಾನು ನನ್ನ ಕ್ವಾಲಿಫಿಕೇಶನ್ ಬಗ್ಗೆ ನಿಜವಾಗಿಯೂ ಚಿಂತಿತನಾಗಿದ್ದೇನೆ. ಈ ಸಮಯದಲ್ಲಿ ನಾವೆಲ್ಲರೂ ಅಸಹಾಯಕರಾಗಿದ್ದೇವೆ. ನಾವು ಕಾದು ನೋಡಬೇಕಾಗಿದೆ ಎಂದು ಜಾನ್ಸನ್ ಹೇಳಿದರು.

 ಕಳೆದ ವರ್ಷ ಗಾಯದ ಸಮಸ್ಯೆಗೀಡಾಗಿರುವ ಏಶ್ಯನ್ ಗೇಮ್ಸ್ ಚಾಂಪಿಯನ್ ಜಾನ್ಸನ್ ಕೊರೊರಾಡೊ ಸ್ಪ್ರಿಂಗ್ಸ್‌ಗೆ ತೆರಳಿ ಸ್ಕಾಟ್ ಸಿಮೊನ್ಸ್‌ರಿಂದ ತರಬೇತಿ ಪಡೆದಿದ್ದಾರೆ. ಭಾರತಕ್ಕೆ ವಾಪಸಾದ ಬಳಿಕ ಮುಂಬೈನ ಎಚ್‌ಎನ್ ರಿಲಯನ್ಸ್ ಪ್ರತಿಷ್ಠಾನದ ಆಸ್ಪತ್ರೆಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಜಿನ್ಸನ್ ಪ್ರಸ್ತುತ ಬೆಂಗಳೂರಿನಲ್ಲಿರುವ ಕ್ರೀಡಾ ಪ್ರಾಧಿಕಾರ(ಸಾಯ್)ದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈಗಿನ ವೈರಸ್ ಆತಂಕವು ನನ್ನ ಮೇಲೆ ಹೆಚ್ಚು ಪರಿಣಾಮಬೀರಿಲ್ಲ. ಅರ್ಹತಾ ಟೂರ್ನಿ ಯಾವಾಗ ನಡೆಯುತ್ತದೆ ಎಂಬ ಕುರಿತು ಸ್ಪಷ್ಟತೆ ಇಲ್ಲ. ನಾನು ನಿರಾಳವಾಗಿರುವಂತೆಯೂ ಇಲ್ಲ ಎಂದು ಜಾನ್ಸನ್ ಹೇಳಿದರು.

ಈ ತನಕ ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ಸುಮಾರು 64 ಅಥ್ಲೀಟ್‌ಗಳು ತೇರ್ಗಡೆಯಾಗಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಇರ್ಫಾನ್ ಕೆಟಿ(ಪುರುಷರ 20 ಕಿ.ಮೀ. ರೇಸ್‌ವಾಕ್), ಅವಿನಾಶ್ ಸಬ್ಲೆ(ಪುರುಷರ 3,000 ಮೀ. ಸ್ಟೀಪಲ್‌ಚೇಸ್), ನೀರಜ್ ಚೋಪ್ರಾ(ಪುರುಷರ ಜಾವೆಲಿನ್ ಎಸೆತ), ಭಾವ್ನಾ ಜಾಟ್(ಮಹಿಳಾ 20 ಕಿ.ಮೀ. ರೇಸ್‌ವಾಕ್) ಹಾಗೂ ಮುಹಮ್ಮದ್ ಅನಸ್, ವಿಕೆ ವಿಸ್ಮಯ, ಜಿಸ್ನಾ, ಮ್ಯಾಥ್ಯೂ ಹಾಗೂ ಟಾಮ್ ನಿರ್ಮಲ್(4-400 ಮೀ. ಮಿಕ್ಸೆಡ್ ರಿಲೇ ಟೀಮ್)ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News