ನೆರೆಮನೆಯ ವೃದ್ಧೆಗೆ ನೆರವಾಗುತ್ತಿರುವ ಆಸ್ಟ್ರೇಲಿಯದ ಮಾಜಿ ಕ್ರಿಕೆಟ್ ಆಟಗಾರ್ತಿ ಲಿಸಾ ಸ್ಥಾಲೇಕರ್

Update: 2020-03-20 17:59 GMT

ಸಿಡ್ನಿ, ಮಾ.20: ಕೊರೋನ ವೈರಸ್ ಸೋಂಕಿನಿಂದ ಪಾರಾಗಲು ಪ್ರತಿಯೊಂದು ದೇಶಗಳಲ್ಲೂ ಅಲ್ಲಿನ ಪ್ರಜೆಗಳು ಪ್ರಯತ್ನ ಮುಂದುವರಿಸಿದ್ದಾರೆ. ತಮ್ಮ ಆರೋಗ್ಯ ರಕ್ಷಣೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ವೃದ್ಧರಿಗೆ ಈ ಸೋಂಕು ಹೆಚ್ಚು ತೊಂದರೆ ಕೊಡುತ್ತದೆ. ಭಾರತದಲ್ಲೂ ಕೊರೋನಕ್ಕೆ ಬಲಿಯಾದವರು ಎಲ್ಲರೂ 64 ವರ್ಷ ದಾಟಿದವರು. ಆಸ್ಟ್ರೇಲಿಯದ ಸಿಡ್ನಿಯಲ್ಲಿ 300ಕ್ಕೂ ಅಧಿಕ ಮಂದಿ ಕೊರೋನ ವೈರಸ್ ಸೋಂಕಿನಿಂದ ತೊಂದರೆ ಅನುಭವಿಸಿದ್ದಾರೆ. ಅದರಲ್ಲೂ ಇಳಿವಯಸ್ಸಿನವರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ.

ದಿನಬಳಕೆಯ ವಸ್ತುಗಳನ್ನು ಪೇಟೆಯಿಂದ ಖರೀದಿಸಿ ತರುವುದು ಇಳಿವಯಸ್ಸಿನವರಿಗೆ ಕಷ್ಟ. ಅವರಿಗೆ ಮನೆಯಿಂದ ಹೊರಬಾರದ ಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯದ ಕ್ರಿಕೆಟ್ ತಂಡದ ಮಾಜಿ ನಾಯಕಿ ಲಿಸಾ ಸ್ಥಾಲೇಕರ್ ಸಿಡ್ನಿಯಲ್ಲಿ ತನ್ನ ನೆರೆಮನೆಯ 88ರ ಹರೆಯದ ವೃದ್ಧೆಗೆ ನೆರವಾಗುತ್ತಿದ್ದಾರೆ. ಪಕ್ಕದ ಮನೆಯ ಝೆದಾರ ಆರೋಗ್ಯ ಚೆನ್ನಾಗಿಲ್ಲ. ಅವರಿಗೆ ದಿನಬಳಕೆಯ ಅಗತ್ಯದ ವಸ್ತುಗಳನ್ನು ಪೇಟೆಯಿಂದ ನೀಡುತ್ತಾ ಅವರ ಆರೋಗ್ಯದ ರಕ್ಷಣೆಗೆ ಕಾಳಜಿ ವಹಿಸಿರುವುದಾಗಿ ಲಿಸಾ ಹೇಳಿದ್ದಾರೆ. ಲಿಸಾ ಆಸ್ಟ್ರೇಲಿಯದ ಫೆಡರಲ್ ಸರಕಾರದ ಕ್ರೀಡಾ ರಾಜತಾಂತ್ರಿಕ ಮಂಡಳಿಯ ಸದಸ್ಯೆ. 40ರ ಹರೆಯದ ಲಿಸಾ 12 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಆಸ್ಟ್ರೇಲಿಯ ತಂಡದ ಪರ 8 ಟೆಸ್ಟ್, 125 ಏಕದಿನ ಹಾಗೂ 54 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಇದೀಗ ತನ್ನ ಸ್ನೇಹಿತರಿಗೆ ಮತ್ತು ಆಟಗಾರರಿಗೆ ಇಂತಹ ಪರಿಸ್ಥಿತಿಯಲ್ಲಿ ಸಮಸ್ಯೆ ಎದುರಿಸುತ್ತಿರುವವರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ. ಲಿಸಾದ ಎದುರಾಳಿಗಳಲ್ಲಿ ಒಬ್ಬರಾಗಿರುವ ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರು ಸ್ವಯಂ ಪ್ರತ್ಯೇಕತೆ ಕಾಯ್ದುಕೊಂಡಿದ್ದಾರೆ.ಇತ್ತೀಚೆಗೆ ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್‌ನಿಂದ ವಾಪಸಾಗಿದ್ದ ಮಿಥಾಲಿ ರಾಜ್ ಅವರು ಹೈದರಾಬಾದ್‌ನ ತನ್ನ ಮನೆಯಲ್ಲಿ ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ. ವಿದೇಶದಿಂದ ಮಾರ್ಚ್ 12ರಂದು ವಾಪಸಾಗಿದ್ದ ತಾನು ಮುನ್ನಚ್ಚೆರಿಕಾ ಕ್ರಮವಾಗಿ ಪ್ರತ್ಯೇಕವಾಗಿ ಉಳಿದುಕೊಂಡಿರುವುದಾಗಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News