×
Ad

ಕೊರೊನಾವೈರಸ್: ಜಮ್ಮು ಕಾಶ್ಮೀರದಲ್ಲಿ ನಿಧಾನಗತಿಯ ಇಂಟರ್ ನೆಟ್ ನಿಂದ ಕಂಗಾಲಾದ ವೈದ್ಯರು

Update: 2020-03-21 22:41 IST

ಶ್ರೀನಗರ: ಶ್ರೀನಗರದಿಂದ ಪ್ರಥಮ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕಾಶ್ಮೀರ ಕಣಿವೆ ಮತ್ತೊಮ್ಮೆ ನಿರ್ಬಂಧ ಸ್ಥಿತಿಯಲ್ಲಿದೆ. ಈ ನಡುವೆ ಅಲ್ಲಿ ಇಂಟರ್ನೆಟ್ ವೇಗ ತೀರಾ ಕಡಿಮೆಯಾಗಿರುವುದರಿಂದ ಕೊರೋನಾವೈರಸ್ ಕುರಿತಂತೆ ಅಗತ್ಯ ಮಾಹಿತಿ  ಪಡೆಯುವುದು ತೀರಾ ಕಷ್ಟವಾಗುತ್ತಿದೆ ಎಂದು ಅಲ್ಲಿನ  ವೈದ್ಯರು, ಆರೋಗ್ಯ ಕ್ಷೇತ್ರದ ಸಿಬ್ಬಂದಿ, ಸಂಶೋಧಕರು ಹಾಗೂ ವಿದ್ಯಾರ್ಥಿಗಳು  ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ಕೊರೋನಾ ವೈರಸ್ ಹಾವಳಿ ಕುರಿತಾದ ನಿಖರ ಮಾಹಿತಿ ಅತಿ ಶೀಘ್ರ ಲಭಿಸುವಂತಾಗಲು ಜಮ್ಮು ಕಾಶ್ಮೀರದಲ್ಲಿ ಫುಲ್ ಸ್ಪೀಡ್ 4ಜಿ ಇಂಟರ್ನೆಟ್ ಮರುಸ್ಥಾಪಿಸಬೇಕೆಂಬ ಆಗ್ರಹವೂ ಕೇಳಿ ಬಂದಿದೆ.

"ಇಂಗ್ಲೆಂಡ್‍ನ ವೈದ್ಯರು ಪ್ರಸ್ತಾಪಿಸಿದ ಇಂಟೆನ್ಸಿವ್ ಕೇರ್ ನಿರ್ವಹಣೆ ಮಾರ್ಗಸೂಚಿಗಳನ್ನು ಡೌನ್ ಲೋಡ್ ಮಾಡಲು ಒಂದು ಗಂಟೆಯಿಂದ ಪ್ರಯತ್ನಿಸುತ್ತಿದ್ದರೂ ಆಗುತ್ತಿಲ್ಲ. ಸ್ಪೀಡ್ ಕೇವಲ 24 ಎಂಬಿಪಿಎಸ್  ಆಗಿದೆ'' ಎಂದು ಶ್ರೀನಗರದ ಸರಕಾರಿ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆಫ್ ಸರ್ಜರಿ ಇಕ್ಬಾಲ್ ಸಲೀಂ ಹೇಳುತ್ತಾರೆ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೈಬಿಡಲು ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬೆನ್ನಲ್ಲೇ ಆಡಳಿತ ಅಲ್ಲಿ ಹೇರಲಾದ ನಿರ್ಬಂಧದ ಭಾಗವಾಗಿ ಹೈಸ್ಪೀಡ್ ಇಂಟರ್ನೆಟ್ ನಿಷೇಧಿಸಿತ್ತು.  ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆಯಾದರೂ ಹೈಸ್ಪೀಡ್ ಇಂಟರ್ನೆಟ್ ಇನ್ನೂ ಕಾಶ್ಮೀರಿಗಳ ಪಾಲಿಗೆ ಕನಸಾಗಿ ಬಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News