ಕೊರೊನಾ ವೈರಸ್: ದಿನಗೂಲಿ ನೌಕರರಿಗೆ 1,000 ರೂ. ನೆರವು ಘೋಷಿಸಿದ ಆದಿತ್ಯನಾಥ್

Update: 2020-03-21 17:32 GMT

 ಲಕ್ನೊ, ಮಾ.21: ರಾಜ್ಯದ ಸುಮಾರು 15 ಲಕ್ಷ ದಿನಗೂಲಿ ನೌಕರರು ಹಾಗೂ 20.37 ಲಕ್ಷ ನಿರ್ಮಾಣ ಕಾರ್ಮಿಕರಿಗೆ ತಲಾ 1,000 ರೂ. ಆರ್ಥಿಕ ನೆರವು ಒದಗಿಸುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

  ಇವರಿಗೆ ದೈನಂದಿನ ಅಗತ್ಯದ ವೆಚ್ಚ ನಿಭಾಯಿಸಲು ತಲಾ 1,000 ರೂ. ಹಣವನ್ನು ನೇರ ವರ್ಗಾವಣೆ ಮೂಲಕ ಒದಗಿಸಲಾಗುವುದು ಎಂದವರು ಹೇಳಿದ್ದಾರೆ.

ಕೊರೊನ ವೈರಸ್ ಹರಡದಂತೆ ತಡೆಯುವ ಕ್ರಮವಾಗಿ ಮಾರ್ಚ್ 22(ರವಿವಾರ) ಜನತಾ ಕರ್ಫ್ಯೂ ಪಾಲಿಸಬೇಕೆಂಬ ಪ್ರಧಾನಿ ಮೋದಿ ಕರೆಯನ್ನು ಬೆಂಬಲಿಸಬೇಕು ಎಂದು ಜನತೆಗೆ ಮನವಿ ಮಾಡಿದ ಆದಿತ್ಯನಾಥ್, ರವಿವಾರ ರಾಜ್ಯದಲ್ಲಿ ಮೆಟ್ರೊ ರೈಲು, ಸಿಟಿ ಬಸ್ ಹಾಗೂ ಸಾರಿಗೆ ಬಸ್ಸುಗಳ ಸಂಚಾರ ಸ್ಥಗಿತಗೊಳ್ಳಲಿದೆ ಎಂದಿದ್ದಾರೆ.

ಕೊರೊನಾ ವೈರಸ್ ಬಗ್ಗೆ ಜನತೆ ಆತಂಕಿತರಾಗಬೇಕಿಲ್ಲ. ಅಗತ್ಯ ವಸ್ತುಗಳ ಹಾಗೂ ಔಷಧಿಗಳ ದಾಸ್ತಾನು ಸಾಕಷ್ಟಿದೆ. ಆದ್ದರಿಂದ ಅಗತ್ಯಬಿದ್ದಷ್ಟೇ ಖರೀದಿಸಬೇಕು. ಅನಗತ್ಯವಾಗಿ ದಾಸ್ತಾನು ಇರಿಸಿಕೊಳ್ಳುವುದು ಬೇಡ ಎಂದು ಜನತೆಗೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಪ್ರತ್ಯೇಕ ಚಿಕಿತ್ಸಾ ವಾರ್ಡ್‌ಗಳ ಕೊರತೆಯಿಲ್ಲ. ರಾಜ್ಯದಲ್ಲಿ 23 ಮಂದಿಗೆ ಕೊರೊನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು ಇದರಲ್ಲಿ 9 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News