ಟ್ವೆಂಟಿ -20 ವಿಶ್ವಕಪ್ ತಂಡದಲ್ಲಿ ಧೋನಿಗೆ ಸ್ಥಾನ ಸಿಗುವುದು ಕಷ್ಟ: ಗವಾಸ್ಕರ್

Update: 2020-03-21 18:13 GMT

ಮುಂಬೈ, ಮಾ.21: ‘‘ಆಸ್ಟ್ರೇಲಿಯದಲ್ಲಿ ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಿಗದಿಯಾಗಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗಾಗಿ ಆಯ್ಕೆಯಾಗಲಿರುವ ಭಾರತೀಯ ಕ್ರಿಕೆಟ್ ತಂಡದಲ್ಲಿ ಎಂ.ಎಸ್. ಧೋನಿಗೆ ಸ್ಥಾನ ಸಿಗುವುದು ಕಷ್ಟಕರ’’ ಎಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

‘‘ನಾನು ಖಂಡಿತವಾಗಿಯೂ ಭಾರತದ ವಿಶ್ವಕಪ್ ತಂಡದಲ್ಲಿ ಧೋನಿ ಇರುವುದನ್ನು ನೋಡಲು ಇಷ್ಟಪಡುವೆ. ಆದರೆ, ಅವರು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆ ಅತ್ಯಂತ ಕಡಿಮೆ ಇದೆ. ಧೋನಿ ದೊಡ್ಡ ಘೋಷಣೆ ಮಾಡುವ ವ್ಯಕ್ತಿಯಲ್ಲ. ಅವರು ವೌನವಾಗಿಯೇ ಪಂದ್ಯದಿಂದ ನಿವೃತ್ತಿಯಾಗಬಹುದು ಎಂಬುದು ನನ್ನ ಅನಿಸಿಕೆ’’ ಎಂದು ‘ದೈನಿಕ ಜಾಗರಣ್’ಗೆ ಗವಾಸ್ಕರ್ ತಿಳಿಸಿದರು.

38ರ ಹರೆಯದ ಧೋನಿ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಕೊನೆಯ ಬಾರಿ ಆಡಿದ್ದರು. ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಭಾರತ ಸೋಲುಂಡಿತ್ತು. ಆ ನಂತರ ಧೋನಿ ಅವರು ಯಾವುದೇ ಪಂದ್ಯದಲ್ಲಿ ಆಡಿರಲಿಲ್ಲ. ಮುಂಬರುವ ಆವೃತ್ತಿಯ ಐಪಿಎಲ್‌ನಲ್ಲಿ ಆಡಲು ಧೋನಿ ತಯಾರಿ ನಡೆಸುತ್ತಿದ್ದರು. ಐಪಿಎಲ್‌ನಲ್ಲಿ ನೀಡುವ ಪ್ರದರ್ಶನದ ಆಧಾರದಲ್ಲಿ ಧೋನಿ ಆಯ್ಕೆ ನಡೆಯಲಿದೆ ಎಂದು ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಐಪಿಎಲ್ 2020ರ ಆವೃತ್ತಿಯ ಟೂರ್ನಿಯು ಮಾರ್ಚ್ 29ರಿಂದ ಆರಂಭವಾಗಬೇಕಾಗಿತ್ತು. ಆದರೆ, ಕೊರೋನ ವೈರಸ್ ಭೀತಿಯಿಂದಾಗಿ ಎಪ್ರಿಲ್ 15ರ ತನಕ ಮುಂದೂಡಲ್ಪಟ್ಟಿದೆ. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಚೆನ್ನೈನಲ್ಲಿ ತರಬೇತಿ ನಡೆಸುತ್ತಿದ್ದರು. ಕೊರೋನ ವೈರಸ್ ಭೀತಿಯಿಂದಾಗಿ ತನ್ನ ಅಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News