ಕೊರೋನ ವೈರಸ್ ಭೀತಿಯ ನಡುವೆಯೂ ಅಭ್ಯಾಸ ಮುಂದುವರಿಸಿದ ಭಾರತ ಹಾಕಿ ತಂಡಗಳು

Update: 2020-03-21 18:15 GMT

ಬೆಂಗಳೂರು, ಮಾ.21:ಕೋವಿಡ್-19 ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸಾಯ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಅಭ್ಯಾಸ ನಿರತವಾಗಿರುವ ಭಾರತದ ಪುರುಷರ ಹಾಗೂ ಮಹಿಳಾ ಹಾಕಿ ಆಟಗಾರರು ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ.

ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್)ಕೇಂದ್ರಕ್ಕೆ ಹೊರಗಿನವರಿಗೆ ಪ್ರವೇಶ ನಿರಾಕರಿಸಲಾಗಿದೆ. ದೈನಂದಿನ ಅಭ್ಯಾಸಕ್ಕೆ ಸಾಯ್ ಕೇಂದ್ರ ಸುಸಜ್ಜಿತವಾಗಿದ್ದು, ಆವರಣದೊಳಗೆ ಅಪರಿಚಿತ ವ್ಯಕ್ತಿಗಳಿಗೆ ಪ್ರವೇಶವಿಲ್ಲ.

‘‘ಕೋವಿಡ್-19 ವೈರಸ್ ನಮ್ಮ ಅಭ್ಯಾಸದ ಮೇಲೆ ಯಾವುದೇ ಪರಿಣಾಮಬೀರಿಲ್ಲ. ನಾವು ನಿರಂತರವಾಗಿ ಕೈ ಸ್ವಚ್ಛಗೊಳಿಸುತ್ತಿದ್ದು, ಉಷ್ಣಾಂಶವನ್ನು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದೇವೆ. ನಾವು ಸುರಕ್ಷಿತ ಪರಿಸರದಲ್ಲಿ ಅಭ್ಯಾಸ ನಿರತವಾಗಿದ್ದೇವೆ. ಸಾಯ್ ಹಾಗೂ ನಮ್ಮ ಕೋಚ್‌ಗಳ ಬೆಂಬಲದಿಂದ ಒಲಿಂಪಿಕ್ಸ್ ಗಾಗಿ ಕಠಿಣ ತರಬೇತಿ ನಡೆಸುತ್ತಿದ್ದೇವೆ’’ ಎಂದು ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.

‘‘ಸಾಯ್ ಕ್ಯಾಂಪಸ್‌ನಲ್ಲಿ ಇಂತಹ ವ್ಯವಸ್ಥೆ ಹೊಂದಿರುವುದು ನಮ್ಮೆಲ್ಲರ ಭಾಗ್ಯ. ಪ್ರತಿಯೊಬ್ಬರೂ ಕಠಿಣ ಶ್ರಮಪಡುತ್ತಿದ್ದು, ಹೀಗಾಗಿ ಹಾಕಿ ತಂಡಗಳು ಒಲಿಂಪಿಕ್ಸ್‌ಗಾಗಿ ತನ್ನ ಅಭ್ಯಾಸವನ್ನು ಮುಂದುವರಿಸಿವೆ. ನಮ್ಮ ಆರೋಗ್ಯವನ್ನು ಪ್ರತಿದಿನ ತಪಾಸಣೆ ನಡೆಸಲಾಗುತ್ತಿದೆ. ನಾವೆಲ್ಲರೂ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ನಮ್ಮ ಗುರಿಯತ್ತ ಗಮನ ನೀಡಲು ಸಾಯ್ ನಮಗೆ ನಿರಂತರವಾಗಿ ನೆರವಾಗುತ್ತಿದೆ’’ ಎಂದು ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿ ತಂಡ ತನ್ನ ಮೊದಲ ಪಂದ್ಯದಲ್ಲಿ ನ್ಯೂಝಿಲ್ಯಾಂಡ್‌ನ್ನು ಎದುರಿಸಲಿದೆ. ಮಹಿಳಾ ಹಾಕಿ ತಂಡ ನೆದರ್‌ಲ್ಯಾಂಡ್ ವಿರುದ್ಧ ಆಡುವುದರೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ. ಎರಡೂ ಪಂದ್ಯಗಳು ಜುಲೈ 25ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News