ಕೋವಿಡ್-19 ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ ಇಟಲಿ ಫುಟ್ಬಾಲ್ ಕ್ಲಬ್

Update: 2020-03-21 18:19 GMT

ರೋಮ್, ಮಾ.21: ಕೋವಿಡ್-19 ಬಿಕ್ಕಟ್ಟನ್ನು ನಿವಾರಿಸುವ ಪ್ರಯತ್ನವಾಗಿ ರೋಮ್‌ನ ಆಸ್ಪತ್ರೆಗಾಗಿ 8 ನೂತನ ತೀವ್ರ ನಿಗಾ ಘಟಕಗಳ ಹಾಸಿಗೆಗಳು ಹಾಗೂ ಮೂರು ತೀವ್ರ ನಿಗಾ ಘಟಕದ ವೆಂಟಿಲೇಟರ್‌ಗಳನ್ನು ಖರೀದಿಸುವುದಾಗಿ ಇಟಲಿ ಫುಟ್ಬಾಲ್ ಕ್ಲಬ್ ಎಎಸ್ ರೋಮ್ ಘೋಷಿಸಿದೆ. ಕ್ಲಬ್‌ನ ನಿಧಿ ಸಂಗ್ರಹ ಅಭಿಯಾನದಲ್ಲಿ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿ ದಿನದ ಸಂಬಳವನ್ನು ದಾನವಾಗಿ ನೀಡಿದ್ದಾರೆ.

ಎಎಸ್ ರೋಮಾ ಅಭಿಯಾನಕ್ಕೆ ತಂಡದ ಆಟಗಾರರು ಹಾಗೂ ಸಿಬ್ಬಂದಿ ದಿನದ ಸಂಭಾವನೆಯನ್ನು ನೀಡಲು ಒಮ್ಮತದಿಂದ ಸಮ್ಮತಿ ನೀಡಿದ್ದಾರೆ ಎಂದು ಕ್ಲಬ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕಳೆದ ಗುರುವಾರ ಎಎಸ್ ರೋಮಾ, ಕೋವಿಡ್-19 ಅಭಿಯಾನವನ್ನು ಘೋಷಿಸಲಾಗಿದ್ದು, ಕ್ಲಬ್‌ನ ಅಧ್ಯಕ್ಷ ಜಿಮ್ ಪಾಲ್ಲೊಟ್ಟಾ ಆರಂಭದಲ್ಲಿ 50,000 ಯುರೋ ದೇಣಿಗೆ ನೀಡಿದ್ದರು. ಆ ಬಳಿಕ ಇನ್ನೂ 50,000 ಯುರೋಸ್ ನೀಡಿದ್ದರು. ಕ್ಲಬ್‌ನ ಫೌಂಡೇಶನ್, ರೋಮಾ ಕೇರ್ಸ್‌ 89,000 ಯುರೋಸ್‌ನ್ನು ಸಂಗ್ರಹಿಸಿತ್ತು.

ಇಟಲಿಯಲ್ಲಿ 4,600ಕ್ಕೂ ಅಧಿಕ ಮಂದಿ ಕೊರೋನ ವೈರಸ್‌ಗೆ ಬಲಿಯಾಗಿದ್ದು, ಮಾ.9ರಿಂದ ಇಟಲಿಯಲ್ಲಿ ಯಾವುದೇ ಕ್ರೀಡಾ ಚಟುವಟಿಕೆಗಳು ನಡೆಯುತ್ತಿಲ್ಲ. ಕೊರೋನ ವೈರಸ್ ವಿಶ್ವದಾದ್ಯಂತ ಈ ತನಕ 10,000ಕ್ಕೂ ಅಧಿಕ ಜೀವವನ್ನು ಬಲಿ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News