ಕೊರೊನಾ ಭೀತಿ: ಪುತ್ತೂರು-ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ಸು ಸ್ಥಗಿತ

Update: 2020-03-21 18:47 GMT

ಪುತ್ತೂರು: ಕೊರೊನಾ ವೈರಸ್ ಮುಂಜಾಗರೂಕತಾ ಕ್ರಮದ ಹಿನ್ನೆಲೆಯಲ್ಲಿ ಪುತ್ತೂರು-ಕಾಸರಗೋಡು, ಪುತ್ತೂರು-ಉಪ್ಪಳ, ಪುತ್ತೂರು-ಅಡೂರು ಸೇರಿದಂತೆ ಕೆಎಸ್ಸಾರ್ಟಿಸಿ ಅಂತರ್‍ರಾಜ್ಯ ಸಾರಿಗೆ ಸೇವೆಯನ್ನು ಮಾ. 31ರವರೆಗೆ ಸ್ಥಗಿತಗೊಳಿಸಲಾಗಿದ್ದು, ಜಿಲ್ಲಾಡಳಿತದ ಸೂಚನೆಯಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ನಾಗೇಂದ್ರ ತಿಳಿಸಿದ್ದಾರೆ. 

ಪುತ್ತೂರು ವಿಭಾಗ ವ್ಯಾಪ್ತಿಯ ಧರ್ಮಸ್ಥಳ, ಬಿ.ಸಿ. ರೋಡು, ಮಡಿಕೇರಿ, ಸುಳ್ಯ ಘಟಕಗಳಿಂದಲೂ ಕಾಸರಗೋಡು ಜಿಲ್ಲೆಗೆ ಓಡಾಟ ನಡೆಸುವ ಬಸ್‍ಗಳ ಸಂಚಾರವನ್ನು ಮಾ. 31ರವರೆಗೆ ಸ್ಥಗಿತಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. . ಪ್ರಯಾಣಿಕರು ಸಹಕರಿಸುವಂತೆ ಅವರು ವಿನಂತಿಸಿದ್ದಾರೆ. 

ಮಾ. 22ರಂದು ನಡೆಯುವ ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಂತೆ ಯಾವುದೇ ಆದೇಶ ಬಂದಿಲ್ಲ. ಆದರೆ, ಜನಸಂಚಾರ ಇಲ್ಲದ ಕಾರಣದಿಂದಾಗಿ ಬಸ್‍ಗಳ ಓಡಾಟ ನಡೆಸುವುದು ಸಾಧ್ಯವಾಗುವುದಿಲ್ಲ. ಪ್ರಯಾಣಿಕರಿಲ್ಲದೆ ಖಾಲಿ ಬಸ್‍ಗಳನ್ನು ಓಡಾಟ ನಡೆಸಿದರೆ ಸಂಸ್ಥೆಗೆ ನಷ್ಟವುಂಟಾಗುತ್ತದೆ. ಆದ ಕಾರಣ ಮಾ. 22ರಂದು ಕನಿಷ್ಠ ಪ್ರಮಾಣದಲ್ಲಿ ಸಾರಿಗೆ ನಿರ್ವಹಣೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಪುತ್ತೂರು-ಕಾಸರಗೋಡು, ಪುತ್ತೂರು-ಕುಂಬಳೆ, ಪುತ್ತೂರು-ಉಪ್ಪಳ, ಪುತ್ತೂರು-ಮಂಜೇಶ್ವರ ನಡುವಣ ಓಡಾಟ ನಡೆಸುತ್ತಿರುವ ಖಾಸಗಿ ಬಸ್‍ಗಳು ಮಾ. 31ರವರೆಗೆ ತಮ್ಮ ಅಂತರ್‍ರಾಜ್ಯ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News