ದೇಶದಲ್ಲಿ 12 ಕೊರೋನ ಸೋಂಕಿತರಿಂದ ರೈಲು ಪ್ರಯಾಣ!

Update: 2020-03-22 05:53 GMT

ಹೊಸದಿಲ್ಲಿ, ಮಾ.22: ದೇಶದಲ್ಲಿ ಮಾರ್ಚ್ 13ರಿಂದ 16ರ ನಡುವೆ ಕನಿಷ್ಠ 12 ಮಂದಿ ಕೋವಿಡ್-19 ಸೋಂಕಿತರು ರೈಲುಗಳಲ್ಲಿ ಪ್ರಯಾಣ ನಡೆಸಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ರೈಲ್ವೆ ಪ್ರಕಟಿಸಿದೆ. ಇದರಿಂದ ರೈಲು ಪ್ರಯಾಣ ಸುರಕ್ಷಿತವಲ್ಲ ಎನ್ನುವ ಆತಂಕ ದೃಢಪಟ್ಟಿದೆ.

ಕೆಲ ಕೊರೋನ ವೈರಸ್ ಪೀಡಿತರು ರೈಲುಗಳಲ್ಲಿ ಪ್ರಯಾಣಿಸಿರುವುದನ್ನು ಗುರುತಿಸಿದೆ. ಇದರಿಂದ ರೈಲು ಪ್ರಯಾಣ ಕೂಡಾ ಅಪಾಯಕಾರಿಯಾಗಿದೆ. ಸಹ ಪ್ರಯಾಣಿಕರಿಗೆ ಕೊರೋನ ಸೋಂಕು ತಗುಲಿದ್ದರೆ ನಿಮಗೆ ಕೂಡಾ ವೈರಸ್ ಹರಡುವ ಸಾಧ್ಯತೆ ಇದೆ. ಆದ್ದರಿಂದ ರೈಲು ಪ್ರಯಾಣ ಬೇಡ. ನೀವು ಮತ್ತು ನಿಮ್ಮ ಪ್ರೀತಿಪಾತ್ರರ ಸುರಕ್ಷೆ ದೃಷ್ಟಿಯಿಂದ ನಿಮ್ಮ ಎಲ್ಲ ಪ್ರಯಾಣವನ್ನು ಮುಂದೂಡಿ ಎಂದು ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ.

ಈ ಮಧ್ಯೆ ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ತಪ್ಪಿಸುವ ದೃಷ್ಟಿಯಿಂದ ಮರುಪಾವತಿ ನಿಯಮಾವಳಿಯನ್ನೂ ಸಡಿಲಿಸಿದೆ. ರೈಲು ರದ್ದಾದ ಪ್ರಕರಣಗಳಲ್ಲಿ ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿಸಿದ ಪ್ರಯಾಣಿಕರು 90 ದಿನಗಳವರೆಗೂ ಟಿಕೆಟ್ ಮೊತ್ತದ ಮರುಪಾವತಿ ಪಡೆಯಬಹುದಾಗಿದೆ. ಈ ಮೊದಲು ಮೂರು ದಿನಗಳ ಒಳಗಾಗಿ ಮರುಪಾವತಿ ಪಡೆಯಬೇಕಿತ್ತು. ಮಾರ್ಚ್ 21ರಿಂದ ಜೂನ್ 21ರವರೆಗೆ ರದ್ದಾದ ಎಲ್ಲ ರೈಲುಗಳಿಗೆ ಇದು ಅನ್ವಯವಾಗಲಿದೆ. ರೈಲ್ವೆ ಮಂಡಳಿ ಈಗಾಗಲೇ ಎಲ್ಲ ರೈಲ್ವೆ ಮ್ಯೂಸಿಯಂ, ರೈಲ್ವೆ ಹೆರಿಟೇಜ್ ಪಾರ್ಕ್ ಹಾಗೂ ಗ್ಯಾಲರಿಗಳನ್ನು ಎಪ್ರಿಲ್ 15ರವರೆಗೆ ಮುಚ್ಚಲು ಆದೇಶಿಸಿದೆ.

ಎಪಿ ಸಂಪರ್ಕ ಕ್ರಾಂತಿ ರೈಲಿನಲ್ಲಿ ಮಾರ್ಚ್ 13ರಂದು ಪ್ರಯಾಣಿಸಿದ್ದ ಎಂಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆದ್ದರಿಂದ ಜನ ಪ್ರಯಾಣ ಮಾಡದಂತೆ ಮನವಿ ಮಾಡುತ್ತಿದ್ದೇವೆ. ರವಿವಾರದಿಂದ ಮೊದಲೇ ಪ್ರಯಾಣ ಆರಂಭಿಸಿದ ರೈಲುಗಳು ಗಮ್ಯತಾಣ ತಲುಪುವವರೆಗೂ ಪ್ರಯಾಣ ಮುಂದುವರಿಸಲಿವೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News