×
Ad

ದೇಶಾದ್ಯಂತ ಮಾ.31 ರ ತನಕ ಎಲ್ಲ ರೈಲು ಸೇವೆ ಬಂದ್

Update: 2020-03-22 12:35 IST

ಹೊಸದಿಲ್ಲಿ,ಮಾ.22: ಕೊರೋನವೈರಸ್ ಪೀಡಿತ ಪ್ರಯಾಣಿಕರು ಸೋಂಕನ್ನು ಇನ್ನಷ್ಟು ಹರಡುತ್ತಿದ್ದಾರೆ ಎಂಬ ಕಳವಳಗಳ ನಡುವೆಯೇ ಅಭೂತಪೂರ್ವ ಹೆಜ್ಜೆಯನ್ನಿರಿಸಿರುವ ಭಾರತೀಯ ರೈಲ್ವೆಯು ಮಾ.22ರ ಮಧ್ಯರಾತ್ರಿಯಿಂದ ಮಾ.31ರ ಮಧ್ಯರಾತ್ರಿಯವರೆಗೆ ಮೇಲ್ ಮತ್ತು ಎಕ್ಸ್‌ಪ್ರೆಸ್ ಸೇರಿದಂತೆ ತನ್ನ ಎಲ್ಲ 13,523 ಪ್ರಯಾಣಿಕ ರೈಲುಗಳ ಸೇವೆಯನ್ನು ರದ್ದುಗೊಳಿಸಿದೆ.

ಕೊಂಕಣ ರೈಲ್ವೆ, ಕೋಲ್ಕತಾ ಮೆಟ್ರೋ ರೇಲ್ ಮತ್ತು ಎಲ್ಲ ಉಪನಗರ ರೈಲು ಸೇವೆಗಳೂ ಇದರಲ್ಲಿ ಸೇರಿವೆ. ಕೇವಲ ಸರಕು ಸಾಗಾಣಿಕೆ ರೈಲುಗಳು ಮಾತ್ರ ಸಂಚರಿಸಲಿವೆ. ನಿರ್ಬಂಧದಲ್ಲಿರುವಂತೆ ಸೂಚಿಸಲಾಗಿದ್ದ ವ್ಯಕ್ತಿಗಳು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಮೂರು ಪ್ರಕರಣಗಳನ್ನು ಶನಿವಾರ ಪತ್ತೆ ಹಚ್ಚಲಾಗಿತ್ತು. ಈ ಪ್ರಯಾಣಿಕರ ಪೈಕಿ 12ಜನರು ಕೊರೋನವೈರಸ್ ಸೋಂಕಿಗೊಳಗಾಗಿದ್ದು ದೃಢಪಟ್ಟಿತ್ತು.

ರೈಲ್ವೆಯು ಈಗಾಗಲೇ ಶುಕ್ರವಾರ ಹಲವಾರು ರೈಲುಗಳನ್ನು ರದ್ದುಗೊಳಿಸುವ ಮೂಲಕ ತನ್ನ ಸೇವೆಗಳನ್ನು ಕಡಿತಗೊಳಿಸಿತ್ತು. ಆದರೆ ಅದಾಗಲೇ ಪ್ರಯಾಣ ಆರಂಭಿಸಿದ್ದ ರೈಲುಗಳು ಪ್ರಯಾಣ ಮುಂದುವರಿಸಲು ಅವಕಾಶ ನೀಡಿತ್ತು.

    ಮಾ.22ರಂದು ಬೆಳಗಿನ ನಾಲ್ಕು ಗಂಟೆಗೆ ಮುನ್ನ ಪ್ರಯಾಣವನ್ನು ಆರಂಭಿಸಿರುವ ರೈಲುಗಳು ತಮ್ಮ ನಿಗದಿತ ಗಮ್ಯದವರೆಗೆ ಸಂಚರಿಸಲಿವೆ. ಪ್ರಯಾಣದ ವೇಳೆ ಮತ್ತು ಅವರ ನಿಗದಿತ ತಾಣಗಳಲ್ಲಿ ಪ್ರಯಾಣಿಕರಿಗಾಗಿ ಸಾಕಷ್ಟು ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ರೈಲ್ವೆ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಯಾಣಿಕರು ಮಾ.31ರವರೆಗೆ ರದ್ದಾಗಿರುವ ಎಲ್ಲ ರೈಲುಗಳ ಸಂಪೂರ್ಣ ಟಿಕೆಟ್ ಶುಲ್ಕವನ್ನು ಜೂ.21ರವರೆಗೆ ವಾಪಸ್ ಪಡೆಯಬಹುದು.

 ಕೊರೋನವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ರೈಲು ಮ್ಯೂಝಿಯಮ್‌ಗಳು, ಹೆರಿಟೇಜ್ ಗ್ಯಾಲರಿಗಳು ಮತ್ತು ಹೆರಿಟೇಜ್ ಪಾರ್ಕ್‌ಗಳನ್ನು ಎ.15ರವರೆಗೆ ಮುಚ್ಚುವಂತೆಯೂ ರೈಲ್ವೆಯು ಆದೇಶಿಸಿದೆ.

 ರವಿವಾರ ಇನ್ನಿಬ್ಬರು ಕೊರೋನವೈರಸ್‌ಗೆ ಬಲಿಯಾಗುವು ದರೊಂದಿಗೆ ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಆರಕ್ಕೇರಿದೆ. ಇದೇ ವೇಳೆ ದೃಢೀಕೃತ ಸೋಂಕು ಪ್ರಕರಣಗಳ ಸಂಖ್ಯೆ 341ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News