ಲ್ಯಾಪ್‌ಟಾಪ್ ಖರೀದಿಯಲ್ಲಿನ ಅಕ್ರಮಕ್ಕೆ ಯಾರು ಹೊಣೆ?

Update: 2020-03-22 18:27 GMT

ಮಾನ್ಯರೇ,

  ತಾಂತ್ರಿಕ ಶಿಕ್ಷಣ ಇಲಾಖೆಯು ಇತ್ತೀಚೆಗೆ ಬಹಿರಂಗವಾಗಿ ಕರೆದಿರುವ ಟೆಂಡರ್ ನೋಟಿಸ್ ಕರ್ನಾಟಕ ಪಾರದರ್ಶಕ ಕಾಯ್ದೆ 4ನೇ ಚಾಪ್ಟರ್‌ನ ಅಧಿನಿಯಮ 17 ಉಲ್ಲಂಘನೆಯಾಗಿದೆಯೆಂಬುದು ಸೋಹಂ ಐಟಿ ಸರ್ವೀಸಸ್ ಕಂಪೆನಿಯು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ದೂರು ಸಲ್ಲಿಸಿರುವ ಮಾಹಿತಿಯೊಂದು ತಡವಾಗಿ ಬೆಳಕಿಗೆ ಬಂದಿದೆ.ಇದು 2019-20ನೇ ಸಾಲಿನಲ್ಲಿ ವ್ಯಾಸಂಗದಲ್ಲಿ ತೊಡಗಿರುವ ಸರಕಾರಿ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಮಹಾವಿದ್ಯಾನಿಲಯಗಳ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಲ್ಲಿ ಭಯಾತಂಕ ಹುಟ್ಟಿಸುವಂತೆ ಮಾಡಿದೆ. ಲ್ಯಾಪ್‌ಟಾಪ್ ಖರೀದಿ ಟೆಂಡರ್ ದಾಖಲೆ ತೆರೆಯುವುದಕ್ಕೆ ಮಾ.19 ನಿಗದಿ ಪಡಿಸಿರುವುದರ ಹಿಂದೆ ತರಾತುರಿ ಇರುವುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಯಾವುದೋ ನಿರ್ದಿಷ್ಟ ಕಂಪೆನಿಯೊಂದಿಗೆ ಕಾನೂನು ಬಾಹಿರವಾಗಿ ಸಕ್ರಿಯವಾಗಿ ಶಾಮೀಲಾಗಿ ಬರೀ 10 ದಿನಗಳೊಳಗೆ ಟೆಂಡರ್ ಪ್ರಕ್ರಿಯೆಯನ್ನು ಮುಗಿಸಿಬಿಡಲೆಂದು ಮುಂದಾಗಿರುವುದರ ಹಿಂದೆ ಸಂಶಯಗಳ ಹುತ್ತವೇ ಗೋಚರಿಸುತ್ತಿದೆ. ದಿನಪತ್ರಿಕೆಗಳಲ್ಲಿ ಪ್ರಕಟಿಸಿರುವ ಟೆಂಡರ್‌ನ ನಂಬರಿಗೂ ಇ-ಪ್ರೊಕ್ಯೂರ್‌ಮೆಂಟ್ ಪೊರ್ಟಲ್‌ನಲ್ಲಿ ಮುದ್ರಿತವಾಗಿರುವ ಸಂಖ್ಯೆಗೂ ಭಾರೀ ವ್ಯತ್ಯಾಸವಿರುವುದು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳಿದೆ.
 ಶೀಘ್ರವೇ ರಾಜ್ಯದ ಮುಖ್ಯಮಂತ್ರಿ ಇತ್ತ ಚಿತ್ತಹರಿಸಿ, ವಿದ್ಯಾರ್ಥಿಗಳ ಗೊಂದಲಗಳಿಗೆ ತೆರೆ ಎಳೆಯುವಂತಾಗಲಿ ಎಂಬುದೇ ವಿದ್ಯಾರ್ಥಿ-ಪಾಲಕ, ಪೋಷಕರ ಆಶಯವಾಗಿದೆ. ತಪ್ಪಿದಲ್ಲಿ ವಿದ್ಯಾರ್ಥಿಗಳೆಲ್ಲರೂ ಸಾಮೂಹಿಕವಾಗಿ ಪ್ರತಿಭಟನೆಯ ಮೂಲಕ ಬೀದಿಗೆ ಇಳಿಯುವುದರಲ್ಲಿ ಅನುಮಾನ ಇಲ್ಲ. 

Writer - ಪರಮೇಶ್ವರ ಬಿ.ಬಿರಾದಾರ

contributor

Editor - ಪರಮೇಶ್ವರ ಬಿ.ಬಿರಾದಾರ

contributor

Similar News