ಜನತಾ ಕರ್ಫ್ಯೂ: ಮೂಡುಬಿದಿರೆ ಜನತೆಯಿಂದ ವ್ಯಾಪಕ ಬೆಂಬಲ

Update: 2020-03-22 18:35 GMT

ಮೂಡುಬಿದಿರೆ: ಕೊರೊನಾ ವೈರಸ್‍ನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ದೇಶದಾದ್ಯಂತ ಕರೆ ನೀಡಿರುವ "ಜನತಾ ಕರ್ಫ್ಯೂ"ಗೆ ರವಿವಾರ ಜನರು ಜಾತಿ,ಧರ್ಮ, ಮತವೆನ್ನದೇ ಎಲ್ಲರೂ ಪೇಟೆಯಲ್ಲಿರುವ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಮನೆಯಲ್ಲಿಯೇ ಕುಳಿತುಕೊಳ್ಳುವ ಮೂಲಕ ಮೂಡುಬಿದಿರೆಯ ಜನತೆ ವ್ಯಾಪಕ ಬೆಂಬಲ ನೀಡಿದ್ದಾರೆ. 

ಮೂಡುಬಿದಿರೆ ಪುರಸಭೆ ವ್ಯಾಪ್ತಿ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿಯೂ ಜನರು ಮನೆಯ ಒಳಗಡೆನೇ ಉಳಿದುಕೊಂಡಿದ್ದರು. ಮೂಡುಬಿದಿರೆ ಪೇಟೆಯಲ್ಲಿ ವಾಹನ ಮತ್ತು ಜನರ ಓಡಾಟ ತುಂಬಾ ವಿರಳವಾಗಿತ್ತು. ರವಿವಾರ ಒಂದೆರಡು ಪೆಟ್ರೋಲ್ ಬಂಕ್ ಹೊರತು ಪಡಿಸಿ ಮೆಡಿಕಲ್‍ಗಳು ಕೂಡಾ ಬಂದ್ ಆಗಿತ್ತು. ಆಟೋ ರಿಕ್ಷಾಗಳು, ಬಸ್ಸುಗಳು ಸಹಿತ ಇತರ ವಾಹನಗಳು ಓಡಾಟವನ್ನು ನಿಲ್ಲಿಸಿದ್ದವು. 

ಮೂಡುಬಿದಿರೆಯ ಸರಕಾರಿ ಆಸ್ಪತ್ರೆಯಲ್ಲೂ ಕೂಡಾ ಹೊರ ಮತ್ತು ಒಳರೋಗಿಗಳ ಸಂಖ್ಯೆಯೂ ತುಂಬಾ ಕಡಿಮೆಯಾಗಿತ್ತು. ಆಸ್ಪತ್ರೆಯ ಬಳಿಯಲ್ಲಿದ್ದ ಕ್ಯಾಂಟೀನ್ ಮಾತ್ರ ತೆರೆದಿರುವುದು ಕಂಡು ಬಂತು. 

ನಿನ್ನೆ ಬೆಂಗಳೂರಿನಲ್ಲಿ ವೋಲ್ವೋ ರದ್ದಾದ ಕಾರಣ ಸಿಕ್ಕಿ ಹಾಕಿಕೊಂಡಿದ್ದ ಪ್ರಯಾಣಿಕರನ್ನು ಕರೆತಂದ ಕೆಎಸ್‍ಆರ್‍ಟಿಸಿ ವಿಶೇಷ ಬಸ್ ಮೂಡುಬಿದಿರೆಯಲ್ಲೆ ಉಳಿದುಕೊಂಡಿದ್ದು ಬಸ್ಸಿನ ಚಾಲಕ ಮತ್ತು ನಿರ್ವಾಹಕ ಮಧ್ಯಾಹ್ನದ ಊಟಕ್ಕೆ ಪರದಾಡುವಂತ್ತಾಯಿತು. ಈ ಸಂದರ್ಭದಲ್ಲಿ ಪತ್ರಕರ್ತ ಗಣೇಶ್ ಕಾಮತ್ ಅವರು ಆ ಇಬ್ಬರನ್ನು ಕ್ಯಾಂಟೀನ್‍ಗೆ ಕರೆದುಕೊಂಡು ಹೋಗಿ ಊಟ ವ್ಯವಸ್ಥೆಗೆ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News