​ಕೊರೋನ ಭೀತಿ: ಮುಂಬೈಯಿಂದ ಆಗಮಿಸಿದ ವ್ಯಕ್ತಿಯ ಮನೆಗೆ ಅಧಿಕಾರಿಗಳ ಭೇಟಿ

Update: 2020-03-22 18:41 GMT

ಪುತ್ತೂರು, ಮಾ.22: ಮುಂಬೈಯಿಂದ ಆಗಮಿಸಿದ ಕಲ್ಲಾರೆ ನಿವಾಸಿಯೊಬ್ಬರ ಮನೆಗೆ ಸಹಾಯಕ ಆಯುಕ್ತರು, ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ಹಾಗೂ ನಗರ ಸಭಾ ಆರೋಗ್ಯ ನಿರೀಕ್ಷಕರು ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಮುನ್ನೆಚ್ಚರಿಕಾ ಕ್ರಮವಾಗಿ ಹೊಟೇಲ್‌ಗಳನ್ನು ಬಂದ್ ಮಾಡುವಂತೆ ಸರಕಾರ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮುಂಬೈಯ ಹೊಟೇಲೊಂದರಲ್ಲಿ ಉದ್ಯೋಗಿಯಾಗಿರುವ ಕಲ್ಲಾರೆ ನಿವಾಸಿಯೋರ್ವರು ಮಾ.22ರಂದು ಬೆಳಗ್ಗೆ ಪುತ್ತೂರು ನಗರದ ಕಲ್ಲಾರೆ ಎಂಬಲ್ಲಿರುವ ತನ್ನ ಮನೆಗೆ ಆಗಮಿಸಿದ್ದರು. ಮನೆಗೆ ಆಗಮಿಸಿದ್ದ ಅವರು ರಸ್ತೆಯಲ್ಲಿ ನಡೆದಾಡುತ್ತಿರುವುದನ್ನು ಕಂಡು ಸ್ಥಳೀಯರಲ್ಲಿ ಕೊರೋನ ವೈರಸ್ ಬಗ್ಗೆ ಆತಂಕ ಕಾಡಿದ್ದು ಅವರು ಸಹಾಯಕ ಆಯುಕ್ತರ ಗಮನಕ್ಕೆ ತಂದಿದ್ದರು.

ಈ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ನಗರ ಸಭಾ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಹಾಗೂ ಶ್ವೇತಾ ಕಿರಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂಬೈಯಲ್ಲಿ ಪರೀಕ್ಷಿಸಿಯೇ ನನ್ನನ್ನು ಕಳುಹಿಸಿರುವುದಾಗಿ ಅವರು ಅಧಿಕಾರಿಗಳಲ್ಲಿ ತಿಳಿಸಿದ್ದಾರೆ. ನಂತರ ಅವರನ್ನು ಸರಕಾರಿ ಅಸ್ಪತ್ರೆಗೆ ಕರೆತಂದು ಪರೀಕ್ಷಿಸಲಾಗಿದ್ದು ಕಾಯಿಲೆ ಬಗ್ಗೆ ಯಾವುದೇ ಲಕ್ಷಣಗಳು ಅವರಲ್ಲಿ ಕಂಡುಬಂದಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆಯಾದರೂ ಅವರನ್ನು ಐಸೋಲೇಶನ್ ವಾರ್ಡ್‌ನಲ್ಲಿ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News