ಕೊರೋನ ಎಫೆಕ್ಟ್: ದ.ಕ. ಜಿಲ್ಲೆಯಲ್ಲಿ ನಿಷೇಧಾಜ್ಞೆಯ ನಡುವೆ ಜನಜೀವನ ಆರಂಭ

Update: 2020-03-23 05:41 GMT

ಮಂಗಳೂರು, ಮಾ.23: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯಲ್ಲಿ ರವಿವಾರ ಮಧ್ಯರಾತ್ರಿಯಿಂದಲೇ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಸೇರಿದಂತೆ ಜಿಲ್ಲಾದ್ಯಂತ ಬಸ್‌ಗಳ ಓಡಾಟ ಸ್ಥಗಿತಗೊಂಡಿದೆ. ಜನರ ಓಡಾಟ ವಿರಳವಾಗಿದೆ.
 
ಈ ನಡುವೆ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಮತ್ತಿತರ ಮಾರ್ಕೆಟ್ ನಲ್ಲಿ ಮುಂಜಾನೆಯ ವೇಳೆ ತರಕಾರಿ, ಹಣ್ಣುಹಂಪಲು, ಮೀನು, ಮಾಂಸ ಖರೀದಿಗೆ ಗ್ರಾಹಕರು ಮುಗಿಬೀಳುವುದು ಕಂಡು ಬಂತು. ಖಾಸಗಿ ಮತ್ತು ಸರಕಾರಿ ಬಸ್ ಓಡಾಟವಿಲ್ಲ. ಹಾಗಾಗಿ ನಗರದಲ್ಲಿ ಜನಸಂಚಾರ ಅಷ್ಟೇನು ಇಲ್ಲ. ಆಟೊ ರಿಕ್ಷಾಗಳು ಭಾಗಶಃ ಓಡಾಡುತ್ತಿವೆ.

ಕೆಲವು ಹೊಟೇಲ್ ಗಳು ತೆರೆದಿವೆ. ಆದರೆ ಅಲ್ಲಿ ತಿನ್ನಲು ಅವಕಾಶವಿಲ್ಲ. ಪಾರ್ಸೆಲ್ ಮಾತ್ರ ಕೊಂಡೊಯ್ಯಬಹುದಾಗಿದೆ. ಬಂದರ್ ದಕ್ಕೆಯಲ್ಲಿ ಎಂದಿನಂತೆ ಚಟುವಟಿಕೆಗಳು ಕಂಡುಬಂದಿವೆ. ಅಂಗಡಿ ಮುಂಗಟ್ಟುಗಳು ಭಾಗಶಃ ತೆರೆದಿವೆ. ಸರಕಾರಿ ಕಚೇರಿಗಳು ತೆರೆದಿವೆ. ಆದರೆ ಸಾರ್ವಜನಿಕ ಸೇವೆ ಇಲ್ಲ. ಖಾಸಗಿ ಕಚೇರಿಗಳ ಪೈಕಿ ಕೆಲವು ತೆರೆದಿವೆ. ಬ್ಯಾಂಕುಗಳು ಕಾರ್ಯಾಚರಿಸುತ್ತಿವೆ.

ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಇಂದು ಯಾವುದೇ ಬಸ್ ಸೇವೆ ಇರುವುದಿಲ್ಲ ಎಂಬ ಸೂಚನಾ ಫಲಕ ಅಳವಡಿಸಲಾಗಿದೆ. ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಬಂದರ್ ನಲ್ಲಿ ಮೀನುಗಾರಿಕೆ ಚಟುವಟಿಕೆಗಳು ಆರಂಭಗೊಂಡಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News